ಜಿಲ್ಲೆ

ಲಂಚ ಸ್ವೀಕಾರ ಪ್ರಕರಣ ಬಂಧಿತ ಮುಡಾ ಆಯುಕ್ತರಿಗೆ ಜಾಮೀನು ನಿರಾಕರಣೆ

ಹರೀಶ ಎಂ.

ಮಂಗಳೂರು: ಉದ್ಯಮಿಯಿಂದ 25 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಮಾ.23ರಂದು ಮಂಗಳೂರು ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಮನ್ಸೂರ್ ಅಲಿ ಮತ್ತು ದಲ್ಲಾಳಿ ಮುಹಮ್ಮದ್ ಸಲೀಂಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ.


ಟಿಡಿಆರ್‌ಗೆ ಸಂಬಂಧಿಸಿದಂತೆ ನಗರದ ಮಂಗಳಾ ಕ್ರೀಡಾಂಗಣದ ಬಳಿ ದಲ್ಲಾಳಿ ಮೂಲಕ ಉದ್ಯಮಿಯಿಂದ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಅದರಂತೆ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಏ.8ರ
ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.


ಈ ಮಧ್ಯೆ ಮುಡಾ ಆಯುಕ್ತ ಮನ್ಸೂರ್ ಅಲಿ ಮತ್ತು ದಲ್ಲಾಳಿ ಮುಹಮ್ಮದ್ ಸಲೀಂ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಅವರು ವಾದ-ಪ್ರತಿವಾದ ಆಲಿಸಿ ಇಬ್ಬರಿಗೂ ಜಾಮೀನು ನಿರಾಕರಿಸಿದ್ದಾರೆ. ಲೋಕಾಯುಕ್ತ ಪೊಲೀಸರ ಪರವಾಗಿ ಸರ್ಕಾರಿ ಅಭಿಯೋಜಕ ರವೀಂದ್ರ ಮನ್ನಿಪ್ಪಾಡಿ ವಾದಿಸಿದ್ದರು.