ಜಿಲ್ಲೆ

ಪೈಪ್ ಮೇಲೆ ಮಣ್ಣು ಮುಗಿಯದ ಬವಣೆ, ವರ್ಷದಲ್ಲಿ ಒಂದು ಬಾರಿಯಾದರೂ ಬಿರುಕು

Dakshina Kannada

ಭರತ್ ಶೆಟ್ಟಿಗಾರ್ ಮಂಗಳೂರು

ತುಂಬೆ ಅಣೆಕಟ್ಟಿನಿಂದ ಮಂಗಳೂರು ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಪೈಪ್‌ಲೈನ್ ಮೇಲೆ ಮಣ್ಣು ಹಾಕಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು...

ಇದು ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡಿರುವ ಆದೇಶ. ಪೈಪ್ ಮೇಲೆ ಮಣ್ಣು ಹಾಕುವ ಕೆಲಸ ನಿರಂತರ ನಡೆಯುತ್ತಿದ್ದರೂ, ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡುವ, ತೆರವುಗೊಳಿಸುವ ಕೆಲಸಗಳು ನಡೆಯುತ್ತಿಲ್ಲ ಎನ್ನುವುದು ಅಷ್ಟೇ ನಿಜ.

ಇದಕ್ಕೆ ಸರಿಯಾಗಿ ಪ್ರತಿವರ್ಷ ಎಂಬಂತೆ ಮಣ್ಣಿನ ಅಡಿಯಲ್ಲಿನ ಮುಖ್ಯ ಕೊಳವೆ ಒಡೆದು ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಹಲವು ಅಡಿಗಳಷ್ಟು ಮಣ್ಣು ಹಾಕುವ ಪರಿಣಾಮ ಪೈಪ್ ಎಲ್ಲಿ ಒಡೆದಿದೆ ಎಂದು ಪತ್ತೆ ಹಚ್ಚುವ ಕೆಲಸಕ್ಕೆ ಒಂದು ವಾರ ಬೇಕಾಗುತ್ತದೆ. ಕಳೆದ ವಾರವೂ ನಗರದ ಕಣ್ಣೂರು ಭಾಗದಲ್ಲಿ ನೀರಿನ ಕೊಳವೆ ಬಿರುಕು ಬಿಟ್ಟು ನೀರು ಪೋಲಾಗಿದ್ದು, ಪತ್ತೆ ಹಚ್ಚಲು ಮೂರು ದಿನ ಬೇಕಾಯಿತು.

ತುಂಬೆಯ ಎಚ್‌ಎಲ್‌ಪಿಎಸ್-118 ಎಂಜಿಡಿ ರೇಚಕ ಸ್ಥಾವರದಿಂದ ಬೆಂದೂರು, ಪಣಂಬೂರು ಕಡೆಗೆ ನೀರು ಸರಬರಾಜಾಗುವ 1000 ಮಿ.ಮೀ ವ್ಯಾಸದ 18 ಎಂಜಿಡಿ ಸಾಮರ್ಥ್ಯದ ಎರಡು ಬೃಹತ್ ಗಾತ್ರದ ಪೈಪ್‌ಲೈನ್ ಮಂಗಳೂರಿಗೆ ಬರುತ್ತಿದೆ. ಪೈಪ್ ದುರಸ್ತಿಗೆ ಸುಲಭವಾಗುವಂತೆ, ಮೇಲೆ ಕಾಣಿಸುವಂತೆ ಇರಬೇಕು ಎಂದು ಜಿಲ್ಲಾಡಳಿತ ನಿರ್ದೇಶಿಸಿತ್ತು. ಹಲವು ವರ್ಷಗಳ ಹಿಂದೆ ತುಂಬೆಯಿಂದ ಮಂಗಳೂರಿಗೆ ನೀರು ಸರಬರಾಜಾಗುವ ಕೊಳವೆ ಮಾರ್ಗ ರಾಷ್ಟ್ರೀಯ ಹೆದ್ದಾರಿ ಬದಿ ನೆಲ ಮಟ್ಟದಿಂದ ಮೇಲೆ ಕಾಣುತ್ತಿತ್ತು. ಪೈಪ್‌ಲೈನ್ ಕಾಮಗಾರಿ ನಡೆದಾಗ ಗದ್ದೆಯಾಗಿದ್ದ ಪ್ರದೇಶದಲ್ಲಿ ಇಂದು ಮಣ್ಣು ಹಾಕಿ ವಿವಿಧ ವಾಣಿಜ್ಯ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣ, ಅಂಗಡಿ, ಹೋಟೆಲ್, ಸಭಾಂಗಣಗಳು ನಿರ್ಮಾಣವಾಗಿವೆ. ಇದರಿಂದ ಪೈಪ್ ಮಣ್ಣಿನಡಿ ಹುದುಗಿ ಹೋಗಿದ್ದು, ಕೆಲವು ಕಡೆ ಮಾತ್ರ ಕಾಣಿಸುತ್ತಿದೆ.

2015ರಲ್ಲಿ ಡಿಸಿ ಆದೇಶ: 2015ರ ಆಗಸ್ಟ್ ತಿಂಗಳಲ್ಲಿ ನೀರಿನ ಪೈಪ್‌ಲೈನ್ ಒಡೆದು ಒಂದು ವಾರ ನಗರದಲ್ಲಿ ನೀರಿಗೆ ಸಮಸ್ಯೆಯಾಗಿತ್ತು. ನೀರು ಪೂರೈಕೆ ಯಥಾಸ್ಥಿತಿಗೆ ತರಲು ಮನಪಾ ಇಂಜಿನಿಯರ್‌ಗಳು ರಾತ್ರಿ ಹಗಲು ಹೆಣಗಾಡಿದ್ದರು. ಈ ಅನಾಹುತ ಬಳಿಕ ಸಭೆ ನಡೆಸಿದ ಆಗಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮತ್ತು ಶಾಸಕರಾಗಿದ್ದ ಜೆ.ಆರ್.ಲೋಬೊ ಮನಪಾ ಅಧಿಕಾರಿಗಳಿಗೆ ಮಣ್ಣು ತೆರವುಗೊಳಿಸುವಂತೆ ಹಾಗೂ ಮಣ್ಣು ಹಾಕಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದ್ದರು. ಅದರಂತೆ ಒಂದೆರಡು ಕಡೆ ತೆರವು ಕಾಮಗಾರಿ ನಡೆದರೂ, ಮತ್ತೆ ಮಣ್ಣು ಬಿದ್ದಿದೆ. ಕಣ್ಣೂರು ಬಳಿಕ ಎಲ್ಲಿಂದ ಪೈಪ್ ಹಾದು ಹೋಗಿದೆ ಎಂದು ತಿಳಿಯುವುದೇ ಇಲ್ಲ.

ನೀರು ಸರಬರಾಜಿನ ಮುಖ್ಯ ಪೈಪ್‌ಪೈನ್ ಮೇಲೆ ಮಣ್ಣು ಹಾಕುವುದು ಗಂಭೀರ ಅಪರಾಧ. ಅದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಈ ಕುರಿತಂತೆ ಈಗಾಗಲೇ ಪಕ್ಷದ ಸದಸ್ಯರ ಆಂತರಿಕ ಸಭೆಯಲ್ಲೂ ಚರ್ಚೆ ನಡೆದಿದೆ. ಈಗಾಗಲೇ ಹಲವು ಬಾರಿ ಪೈಪ್ ಬಿರುಕು ಬಿಟ್ಟು ಸಮಸ್ಯೆಯಾಗಿರುವುದರಿಂದ ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲ ಮಣ್ಣು ಹಾಕಿರುವುದನ್ನು ತೆರವುಗೊಳಿಸಲಾಗುವುದು. ಪ್ರೇಮಾನಂದ ಶೆಟ್ಟಿ ಮಹಾನಗರ ಪಾಲಿಕೆ ಮುಖ್ಯಸಚೇತಕ