ಜಿಲ್ಲೆ

ಜನರ ಮನಸೆಳೆಯದ ಮಣ್ಣಿನ ಗಣಪ!

* ಬಣ್ಣ ಬಣ್ಣದ ಮೂರ್ತಿಗಳಗಷ್ಟೇ ಬೇಡಿಕೆ

* ಸಂಕಷ್ಟದಲ್ಲಿ ಗೌರಿ&ಗಣೇಶ ತಯಾರಕರು

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಬಣ್ಣ ಬಣ್ಣದ ಗಣೇಶಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು, ಗಣೇಶಮೂರ್ತಿಗಳ ಉಚಿತ ವಿತರಣೆ ತಾಲೂಕಿನ ಸ್ಥಳಿಯ ಗಣೇಶಮೂರ್ತಿ ತಯಾರಕರಿಗೆ ಸಂಕಷ್ಟ ಎದುರಾಗಿದೆ.

ರಾಮನಗರ ತಾಲೂಕಿನಲ್ಲಿ ಕೆಲವು ಕುಂಬಾರಿಕೆ ಕುಟುಂಬಗಳು ಕೈ ಕುಸುರಿಯಲ್ಲಿ ಜೇಡಿ ಮಣ್ಣಿನ ಪರಿಸರಸ್ನೇಹಿ ಗಣಪ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕು ನಡೆಸುತ್ತಿವೆ. ಪ್ರಮುಖವಾಗಿ ಈ ಹಿಂದಿನಿಂದಲೂ ಜೇಡಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯಲ್ಲಿ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದ ಹಲವು ಕುಂಬಾರಿಕೆ ಕುಟುಂಬಗಳು ಗುರುತಿಸಿಕೊಂಡಿವೆ.

ಗೌರಿ&ಗಣೇಶ ಹಬ್ಬಕ್ಕೆ ಮುಂಚಿತವಾಗಿ ಮಣ್ಣು ಹದ ಮಾಡಿ ಕೈ ಕುಸುರಿಯಲ್ಲಿ ನೂರಾರು ಗಣೇಶ ಮೂರ್ತಿ ತಯಾರಿಸಿ ಹಾನಿಕಾರಕವಲ್ಲದ ನೈಸರ್ಗಿಕ ಬಣ್ಣ ಹಚ್ಚಿ, ನಗರ ಪ್ರದೇಶದಲ್ಲಿ ಗಣೇಶಮೂರ್ತಿ ಮಾರಾಟಮಾಡಿ ಬದುಕು ಸಾಗಿಸುತ್ತಿವೆ.

ಚಿಕ್ಕ ಮೂರ್ತಿಗಳಿಂದ ಹಿಡಿದು ದೊಡ್ಡ ದೊಡ್ಡ ಗಣೇಶಮೂರ್ತಿಗಳನ್ನು ಪರಿಸರಸ್ನೇಹಿಯಾಗಿ ತಯಾರು ಮಾಡುವುದು ವಿಶೇಷ. ರಾಮನಗರ ಜಿಲ್ಲೆಯ ನೂರಾರು ಗ್ರಾಮಗಳ ಭಕ್ತ ಮಂಡಳಿಗಳು ಬನ್ನಿಕುಪ್ಪೆ ಗಣೇಶಮೂರ್ತಿಗಳನ್ನೇ ಕೊಂಡು ಗಣೇಶ ಹಬ್ಬ ಆಚರಿಸುತ್ತಿದ್ದ ಕಾಲವೂ ಇತ್ತು. ಆದರೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಣ್ಣ ಬಣ್ಣದ ಗಣೇಶಮೂರ್ತಿಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ಹಾಗೂ ರಾಜಕಾರಣಿಗಳು ಬೇರೆ ಕಡೆಯಿಂದ ನೂರಾರು ಮೂರ್ತಿಗಳನ್ನು ಒಟ್ಟಿಗೆ ತಂದು ಉಚಿತವಾಗಿ ವಿತರಣೆ ಮಾಡುತ್ತಿರುವ ಕಾರಣದಿಂದಾಗಿ ಮೂರ್ನಾಲ್ಕು ವರ್ಷಗಳಿಂದಲೂ ಜೇಡಿ ಮಣ್ಣಿನ ಗಣೇಶಮೂರ್ತಿಗಳಿಗೆ ಬೇಡಿಕೆ ಇಲ್ಲದಂತಾಗಿದೆ. ನೂರಾರು ಗಣೇಶಮೂರ್ತಿ ತಯಾರಿಸುತ್ತಿದ್ದ ಸಾಕಷ್ಟು ಕುಟುಂಬಗಳ ಪೈಕಿ ಈಗ ಎರಡ್ಮೂರು ಮಂದಿ ಬೆರಳೆಣಿಕೆಯಷ್ಟು ಮೂರ್ತಿಗಳನ್ನು ತಯಾರಿಸುತ್ತಿದ್ದು, ಹಲವರು ಗಣೇಶಮೂರ್ತಿ ತಯಾರಿಕೆಯಿಂದಲೇ ದೂರಸರಿದಿದ್ದಾರೆ.

ವಿವಿಧ ಬಗೆಯ ಗಣೇಶಮೂರ್ತಿಗಳು

ಬನ್ನಿಕುಪ್ಪೆಯಲ್ಲಿ ಜೇಡಿ ಮಣ್ಣಿನಿಂದ ವಿವಿಧ ಆಕಾರಗಳಲ್ಲಿ ನಾಗರ ಹಾವಿನ ಗಣೇಶ, ನವಿಲು, ಮೂಷಿಕ, ನಂದಿ, ಸಿಂಹ, ಈಶ್ವರ, ಕಮಲ, ಏಳುತಲೆ ಸರ್ಪ ಹೀಗೆ ವಿವಿಧ ಭಂಗಿಯ ಹಲವಾರು ಬಗೆಯ ಮೂರ್ತಿಗಳು ತಯಾರಾಗುತ್ತವೆ. ಚಿಕ್ಕ ಗಣೇಶಮೂರ್ತಿಗಳಿಂದ ಹಿಡಿದು ಐದು ಅಡಿ ಎತ್ತರದವರೆಗಿನ ಮೂರ್ತಿಗಳು ಸಿದ್ಧವಾಗುತ್ತವೆ. ಆದರೆ ಹೊರಗಿನ ಗಣೇಶಮೂರ್ತಿಗಳು ನಮ್ಮ ವ್ಯಾಪಾರವನ್ನು ದೂರಮಾಡುತ್ತಿವೆ ಎಂಬುದು ಗಣೇಶಮೂರ್ತಿ ತಯಾರಿಕಾ ಕುಟುಂಬಗಳ ಅಳಲಾಗಿದೆ.

ಉಚಿತ ವಿತರಣೆ ಪೆಟ್ಟು

ಕೆಲವು ರಾಜಕಾರಣಿಗಳು ಜಿಲ್ಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಇಡೀ ತಾಲೂಕಿನ ಗ್ರಾಮಗಳಿಗೆ ಹೊರ ರಾಜ್ಯದ ಗಣೇಶಮೂರ್ತಿಗಳನ್ನು ಕೊಡುಗೆಯಾಗಿ ನೀಡುತ್ತಿರುವ ಕಾರಣ ಸ್ಥಳಿಯವಾಗಿ ತಯಾರಾಗುವ ಗಣೇಶಮೂರ್ತಿಗಳಿಗೆ ಬೇಡಿಕೆ ಇಲ್ಲವಾಗಿದ್ದು, ಸ್ಥಳಿಯ ಮೂರ್ತಿ ತಯಾರಕರು ಸಂಕಷ್ಟದ ಹಾದಿ ತುಳಿಯುವಂತಾಗಿದೆ.

ಮಾರಾಟಕ್ಕೆ ಜಾಗ ಸಿಗುವುದು ಕಷ್ಟ

ಎರಡು ಮೂರು ದಿನ ಹಬ್ಬ ಇರುವಾಗ ಗಣೇಶ ಮೂರ್ತಿಗಳನ್ನು ರಾಮನಗರ&ಚನ್ನಪಟ್ಟಣ ನಗರ ಪ್ರದೇಶದ ಪೇಟೆ ಬೀದಿಗಳಲ್ಲಿ ಇಟ್ಟು ಮಾರಾಟ ಮಾಡುತ್ತಾ ಬಂದಿದ್ದೇವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪೇಟೆ ಬೀದಿಗಳಲ್ಲಿ ಮಾರಾಟಕ್ಕೆ ಜಾಗವೂ ಸಿಗುತ್ತಿಲ್ಲ. ಇದರಿಂದ ಹಬ್ಬದ ಸಮಯದಲ್ಲಿ ಪೇಟೆ ಬೀದಿಯಲ್ಲಾದರೂ ಮಾರಾಟ ಮಾಡಿ ಒಂದಷ್ಟು ಆದಾಯ ಸಿಗುತ್ತದೆ ಎಂಬ ಭರವಸೆಯೂ ಇಲ್ಲವಾಗುತ್ತಿದೆ ಎನ್ನುತ್ತಾರೆ ಗಣೇಶಮೂರ್ತಿ ತಯಾರಕಿ ಲ್ಮ.

ಪೂರ್ವಿಕರ ಕಾಲದಿಂದಲೂ ಪರಿಸರಕ್ಕೆ ಹಾನಿಯಾಗದ ನೈಸರ್ಗಿಕ ಬಣ್ಣ ಮಾತ್ರ ಹಚ್ಚಿ ಸಂಪೂರ್ಣವಾಗಿ ಜೇಡಿ ಮಣ್ಣಿನಿಂದ ಗಣೇಶಮೂರ್ತಿ ತಯಾರಿಸುತ್ತೇವೆ. ಆದರೆ ಇಂದು ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಹೊರಗಿನ ಗಣೇಶಮೂರ್ತಿಗಳು ಲಗ್ಗೆ ಇಟ್ಟಿರುವ ಕಾರಣ ಹಾಗೂ ಉಚಿತ ಗಣೇಶಮೂರ್ತಿಗಳ ವಿತರಣೆಯಿಂದ ನಾವು ಮೂರ್ತಿ ತಯಾರಿಕೆಯಿಂದ ದೂರಸರಿಯುವಂತಾಗಿದೆ. > ಆನಂದ್​, ಮಣ್ಣಿನ ಗಣೇಶಮೂರ್ತಿ ತಯಾರಕ ಬನ್ನಿಕುಪ್ಪೆ.