ವಿರಾಜಪೇಟೆ: ಅಮ್ಮತ್ತಿ ಕೊಡವ ಸಮಾಜ, ಪೊಮ್ಮಕ್ಕಡ ಕೂಟ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ಅಮ್ಮತ್ತಿ ಕೊಡವ ಸಮಾಜದ ಸದಸ್ಯರು ಮತ್ತು ಅವರ ಕುಟುಂಬದವರಿಗೆ ಆ.3ರಂದು 2ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ಹೇಳಿದರು.
ಬಿಳುಗುಂದ ಗ್ರಾಮದ ಐನಂಡ ನವೀನ್ ಚಂಗಪ್ಪ ಸಹೋದರರ ಗದ್ದೆಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದ್ದು, ನಾಟಿ ನೆಡುವುದು, ನಾಟಿ ಓಟ, ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಹಗ್ಗಜಗ್ಗಾಟ, ವಿಷದ ಚೆಂಡು ಸೇರಿದಂತೆ ಇತರ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ದಾನಿಗಳಾದ ಪಟ್ಟಡ ದೀಪಕ್ ಕಾರ್ಯಪ್ಪ, ನೆಲ್ಲವಂಡ ಮನು ಕುಶಾಲಪ್ಪ, ಐನಂಡ ನವೀನ್ ಚಂಗಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸೋಮೆಯಂಡ ಎಸ್.ಪೂಣಚ್ಚ, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಅಮ್ಮತ್ತಿ ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಾರಂಡ ಇಗ್ಗುಮಣಿ ಅಚ್ಚಯ್ಯ, ಖಜಾಂಚಿ ಮಾಚಿಮಂಡ ಜಯ ಉತ್ತಪ್ಪ, ಸೋಮೆಯಂಡ ಎಸ್.ಪೂಣಚ್ಚ ಸುದ್ದಿಗೋಷ್ಠಿಯಲ್ಲಿದ್ದರು.