ಶಿರಸಿ: ನಗರಾಡಳಿತ ನಿರ್ವಿುಸಿದ ಕಟ್ಟಡಗಳ ಸದ್ಬಳಕೆ ಆಗಬೇಕು. ನಗರಸಭೆಯ ಮಳಿಗೆಗಳಿಂದ ವ್ಯವಸ್ಥಿತ ಬಾಡಿಗೆ ವಸೂಲಿಯಾಗಬೇಕು.ಕಸ ಸಂಗ್ರಹಣೆಯಲ್ಲಿ ನಿರಂತರತೆ ತರಬೇಕು ಎಂಬಿತ್ಯಾದಿ ಸಲಹೆಗಳು ಮಂಗಳವಾರ ಆಯೋಜಿಸಿದ್ದ ನಗರಸಭೆ ಆಯವ್ಯಯ ಪೂರ್ವ ಸಾರ್ವಜನಿಕ ಸಲಹೆ ಸಭೆಯಲ್ಲಿ ಕೇಳಿ ಬಂದವು.
ಸಾಮಾಜಿಕ ಕಾರ್ಯಕರ್ತ ಜಿ.ಜಿ. ಹೆಗಡೆ ಮಾತನಾಡಿ, ನಗರಸಭೆ ಮಾಲೀಕತ್ವದಡಿ ಸಾಕಷ್ಟು ಮಳಿಗೆಗಳಿದ್ದರೂ ಆದಾಯ ಮಾತ್ರ ತೀರಾ ಕಡಿಮೆಯಿದೆ. ಮಳಿಗೆಗಳಿಂದ ಸರಿಯಾದ ಬಾಡಿಗೆ ಬರುತ್ತಿಲ್ಲ. ಗುತ್ತಿಗೆ ಪಡೆದವರು ಬೇರೊಬ್ಬರಿಗೆ ಹೆಚ್ಚಿನ ಬಾಡಿಗೆಗೆ ತುಂಡು ಗುತ್ತಿಗೆ ನೀಡುತ್ತಿದ್ದಾರೆ. ಜತೆಗೆ ನಗರಸಭೆಗೂ ಸರಿಯಾದ ಬಾಡಿಗೆ ನೀಡುತ್ತಿಲ್ಲ. ಇಂತಹ ನಡೆಯಿಂದ ನಗರಾಡಳಿತದ ಆದಾಯಕ್ಕೆ ಲಕ್ಷಾಂತರ ರೂ. ಹೊಡೆತ ಬೀಳುತ್ತಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಬಾಡಿಗೆ ವಸೂಲಿಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಬಿಡ್ಕಿಬೈಲ್ನಲ್ಲಿ ಜಾತ್ರೆ ವೇಳೆ ತೆರವು ಮಾಡಿದ ಮಳಿಗೆಗಳನ್ನು ತ್ವರಿತವಾಗಿ ನಿರ್ವಿುಸಲು ಅವಕಾಶ ನೀಡಬೇಕು. ಇದರಿಂದ ನಗರಸಭೆಗೆ ಆದಾಯ ಹೆಚ್ಚುತ್ತದೆ ಎಂದ ಅವರು, ನಗರದಲ್ಲಿನ ಮಳಿಗೆಗಳಿಗೆ ಉದ್ಯಮ ಪರವಾನಗಿ ಕಡ್ಡಾಯಗೊಳಿಸಬೇಕು. ನಗರಸಭೆ ಜಾಗ ಅತಿಕ್ರಮಣವಾದರೆ ಖುಲ್ಲಾಪಡಿಸುವ ಕಾರ್ಯವಾಗಬೇಕು. ಆಸ್ತಿ ತೆರಿಗೆಯನ್ನು ಜಾಗರೂಕತೆಯಿಂದ ವಸೂಲಿ ಮಾಡಬೇಕು. ನಗರಸಭೆಯ ವಿದ್ಯುತ್ ಬಿಲ್ ಹೆಚ್ಚುತ್ತಿದ್ದು, ಸೋಲಾರ್ ಅಳವಡಿಸುವ ಕಾರ್ಯವಾಗಬೇಕು. ನಗರಸಭೆ ರ್ಪಾಂಗ್ ಜಾಗ ಸಾರ್ವಜನಿಕ ಬಳಕೆಗಿಂತ ಖಾಸಗಿಯವರ ಬಳಕೆಗೆ ನೀಡಲಾಗುತ್ತಿದ್ದು ಇದು ತಪ್ಪಬೇಕು. ನಗರಸಭೆಯೇ ನಡೆಸುತ್ತಿರುವ ಗೊಬ್ಬರದ ಮಳಿಗೆ ಸ್ಥಳಾಂತರಿಸಿ, ಅಲ್ಲಿ ಬೇರೆ ಬಾಡಿಗೆ ನೀಡಬೇಕು. ಶಾಸಕರ ಮಾದರಿ ಶಾಲೆ ಬಳಿ ಪರಿಶಿಷ್ಟ ಜಾತಿ, ಪಂಗಡದವರಿಗೆ ನೀಡಬೇಕಿದ್ದ ಮಳಿಗೆ ಖಾಲಿ ಬಿದ್ದಿದೆ. ಅದನ್ನು ಬಾಡಿಗೆಗೆ ನೀಡಬೇಕು. ನಗರೋತ್ಥಾನ ಕಾಮಗಾರಿಗಳು ಕಳಪೆಯಾಗಿದ್ದು, ಸೂಕ್ತ ತನಿಖೆ ನಡೆಸಬೇಕು. ಕೊಂಡವಾಡೆ ನಿರ್ವಿುಸಿದರೂ ಪ್ರಯೋಜನ ಆಗುತ್ತಿಲ್ಲ. ಕಸ ಸಂಗ್ರಹಣೆಗೆ ನೀಡಿದ್ದ ಡಬ್ಬಿಗಳು ಕಾಣೆಯಾಗಿವೆ. ಕಸ ಸಂಗ್ರಹ ವಾಹನಗಳನ್ನು ಗುಜರಿಗೆ ಹಾಕುವಂತಾಗಿವೆ ಎಂದು ದೂರಿದರು.
ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಮಾತನಾಡಿ, ನಗರಸಭೆಯಿಂದ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಉದ್ಯಾನ, ರುದ್ರಭೂಮಿಗಳು ದುಃಸ್ಥಿತಿ ತಲುಪಿದ್ದು, ಅಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಎಂದರು.
ಪತ್ರಕರ್ತ ನರಸಿಂಹ ಅಡಿ ಮಾತನಾಡಿ, ನಗರಸಭೆ ವಾಹನದಲ್ಲಿ ಹೆಚ್ಚುವರಿ ಕಸ ಕೊಂಡೊಯ್ಯದ ಕಾರಣ ನಗರದ ಖಾಲಿ ನಿವೇಶನಗಳು ತ್ಯಾಜ್ಯ ಘಟಕಗಳಾಗಿವೆ. ಹಾಗಾಗಿ ಮನೆಮನೆ ಕಸ ಸಂಗ್ರಹಣೆ ವಾಹನದಲ್ಲಿ ಹೆಚ್ಚುವರಿ ಕಸ ಸಾಗಣೆಗೂ ಅವಕಾಶ ನೀಡಬೇಕು ಎಂದರು.
ನಿವೃತ್ತ ವಿಜ್ಞಾನಿ ಡಾ. ಪ್ರಭಾಕರ ಭಟ್ಟ ಮಾತನಾಡಿ, ನಗರದ ಜಲಮೂಲಗಳ ಜಲಾನಯನ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಬೇಕು. ವಸೂಲಿ ಮಾಡಿದ ನೀರಿನ ಕರದಲ್ಲಿ ಜಲಮೂಲಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದರು.
ಪೌರಾಯುಕ್ತ ರಮೇಶ ನಾಯ್ಕ ಮಾತನಾಡಿ, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ನಗರದೊಳಗೆ ಹಂದಿ ಸಾಕಣೆಗೆ ಅವಕಾಶವಿಲ್ಲ. ಈ ಕುರಿತು ಹಂದಿ ಸಾಕಣೆದಾರರಿಗೆ ನೋಟಿಸ್ ನೀಡಲಾಗಿದೆ. ಜತೆಗೆ ಪೊಲೀಸ್ ಠಾಣೆಯಲ್ಲಿ ನಗರಸಭೆಯಿಂದ ದೂರು ದಾಖಲಿಸಲಾಗಿದೆ. | ಶಿವರಾಜ, ಪರಿಸರ ಇಂಜಿನಿಯರ್