ಜಿಲ್ಲೆ

ಆ.31ರಂದು ರಾಷ್ಟ್ರಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ‘ತಾಲ್ಲೂಕಿನ ಬೆಳಗುಂದಿಯ ಶೂನ್ಯ ಫಾರ್ಮ್‌ ರಿಟ್ರೀಟ್‌ ಆವರಣದಲ್ಲಿ ಆ.31ರಂದು ಸಂಜೆ 6 ಗಂಟೆಗೆ ‘ಮೇಘ ಮಲ್ಹಾರ ಎಂ.’ ರಾಷ್ಟ್ರಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆಯ ಫಿನಾಲೆ ಆಯೋಜಿಸಲಾಗಿದೆ’ ಎಂದು ಸಂಘಟಕಿ ಭಕ್ತಿವೇದ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ ಹೋರಾಟಗಾರ ಡಾ.ಎ.ಜಿ.ತೆಂಡೂಲ್ಕರ್‌ ಸವಿನೆನಪಿಗಾಗಿ ಮತ್ತು ಶಾಸ್ತ್ರೀಯ ಸಂಗೀತದತ್ತ ಯುವ ಕಲಾವಿದರನ್ನು ಸೆಳೆಯಲು ಈ ಸ್ಪರ್ಧೆ ಆಯೋಜಿಸಿದ್ದೇವೆ. ಆನ್‌ಲೈನ್‌ ಮೂಲಕ ನಡೆದ ಆಡಿಷನ್‌ನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 40 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಈ ಪೈಕಿ ಆ.30ರಂದು ನಡೆಯಲಿರುವ ಸೆಮಿಫೈನಲ್‌ಗೆ 28 ಮಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ 12 ಸ್ಪರ್ಧಿಗಳನ್ನು ಮಾರನೇ ದಿನ ನಡೆಯುವ ಫಿನಾಲೆಗೆ ಆಯ್ಕೆ ಮಾಡಲಾಗುವುದು’ ಎಂದರು.

‘ಎ.ಜಿ.ತೆಂಡೂಲ್ಕರ್‌ ಅವರು ಮಹಾತ್ಮ ಗಾಂಧೀಜಿ, ಜವಾಹರಲಾಲ್‌ ನೆಹರೂ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.ಸರ್ದಾರ್‌ ವಲ್ಲಭಬಾಯಿ ಕಾರ್ಯದರ್ಶಿಯಾಗಿದ್ದರು. 12 ಭಾಷೆ ಮಾತನಾಡುತ್ತಿದ್ದ ಅವರು, ತಮ್ಮ ಬದುಕಿನಲ್ಲಿ ಅನೇಕ ಏಳು–ಬೀಳು ಕಂಡಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ನನ್ನ ಅಜ್ಜನವರಾದ ಅವರ ನೆನಪಿನಲ್ಲಿ ಸಂಗೀತ ಸ್ಪರ್ಧೆ ಆಯೋಜಿಸುತ್ತಿರುವುದಕ್ಕೆ ಹೆಮ್ಮೆ ಇದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಹಿನ್ನೆಲೆ ಗಾಯಕ ರೂಪಕುಮಾರ ರಾಠೋಡ, ಅವರ ಪತ್ನಿ ಸೋನಾಲಿ ರಾಠೋಡ ಆಗಮಿಸುವರು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಪ್ರತಿವರ್ಷ ಇಂಥ ಸ್ಪರ್ಧೆ ನಡೆಸುವ ಯೋಚನೆ ಇದೆ’ ಎಂದು ತಿಳಿಸಿದರು.

ಯಾದವೇಂದ್ರ ಪೂಜಾರಿ, ಇಮ್ರಾನ್‌, ರೇನಿ ರಾಮದಾಸ ಇತರರಿದ್ದರು.