ಹೊಸಕೋಟೆ: ಮುಂಜಾನೆಯಿಂದಲೇ ಸ್ವಯಂಪ್ರೇರಿತವಾಗಿ ಜನ ಸಾಲುಗಟ್ಟಿ ನಿಂತು ರಕ್ತದಾನ ಮಾಡಲು ಮುಂದಾಗಿರುವುದು ಕಂಡು ಮನಸ್ಸು ತುಂಬಿ ಬಂದಿದೆ, ಜೀವ ರಕ್ಷಿಸಲು ಜನರಿದ್ದಾರೆ ಎಂಬುದು ವೇದ್ಯವಾಯಿತು. ಸಮಾಜಪರವಾದ ಒಳ್ಳೆಯ ಕೆಲಸಗಳಿಗೆ ಜನರ ಬೆಂಬಲ ಇದ್ದೇ ಇರುತ್ತದೆ ಎಂಬುದು ಸಾಬೀತಾಯಿತು ಎಂದು ಸಚಿವ ಎಂಟಿಬಿ ನಾಗರಾಜ್ ಹರ್ಷ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಮತ್ತೊಬ್ಬರ ಜೀವ ರಕ್ಷಣೆಯಂಥ ಪುಣ್ಯದ ಕೆಲಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಂಬಲ ವ್ಯಕ್ತಪಡಿಸಿರುವುದು ನನಗೆ ಕಣ್ತುಂಬಿ ಬಂದಿದೆ ಎಂದರು.
ಮುಖಂಡರ, ಕಾರ್ಯಕರ್ತರ ಶ್ರಮ ಅಪಾರ: ತಾಲೂಕಿನ ಬಿಜೆಪಿ ಮುಖಂಡರಿಗೆ ರಕ್ತದಾನ ಶಿಬಿರಕ್ಕೆ ಆಯಾ ಭಾಗದಿಂದ ದಾನಿಗಳನ್ನು ಕರೆ ತರುವ ಜವಾಬ್ದಾರಿ ವಹಿಸಲಾಗಿತ್ತು. ಪ್ರತಿಯೊಬ್ಬರೂ ಬೂತ್‌ಮಟ್ಟದಿಂದ ದಾನಿಗಳನ್ನು ಕರೆತರುವ ಕೆಲಸವನ್ನು ಉತ್ತಮವಾಗಿ ನಿಭಾಯಿಸಿದ್ದರಿಂದ ಶಿಬಿರ ಯಶಸ್ವಿಯಾಗಿದೆ ಎಂದು ಸಚಿವರು ಹೇಳಿದರು.
ಎರಡೂವರೆ ವರ್ಷ ಕರೊನಾ ಕಾರಣದಿಂದ ಇನ್ನಿತರ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದ ಕೊರತೆ ಎದುರಾಗಿತ್ತು. ಆ ಸಂದರ್ಭದಲ್ಲಿ ಯಾರೂ ರಕ್ತದಾನ ಮಾಡಲು ಮುಂದೆ ಬರುತ್ತಿರಲಿಲ್ಲ, ಸಹಜವಾಗಿ ಎಲ್ಲರಲ್ಲಿಯೂ ಆತಂಕವಿದ್ದೇ ಇತ್ತು. ಇದರಿಂದ ವೈದ್ಯಕೀಯ ಸಿಬ್ಬಂದಿಯೂ ಸಾಕಷ್ಟು ಪರದಾಡಿದ್ದರು ಎಂದರು.
ಪ್ರಸ್ತುತ ಪರಿಸ್ಥಿತಿ ತಿಳಿಯಾಗಿದೆ ಯಾವುದೇ ಆತಂಕವಿಲ್ಲದೆ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಜೀವರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ರಕ್ತದಾನ ಶಿಬಿರಕ್ಕೆ ಭಾರೀ ಸ್ಪಂದನೆ: ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ತಾಲೂಕಿನ ಜನರಿಂದ ಭಾರಿ ಸ್ಪಂದನೆ ವ್ಯಕ್ತವಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಶಿಬಿರದಲ್ಲಿ 1306 ಯೂನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಸಚಿವ ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ತಾಲೂಕಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಅತೀ ಹೆಚ್ಚು ರಕ್ತ ಸಂಗ್ರಹ ಮಾಡಿದ ದಾಖಲೆಗೆ ಕಾರಣವಾಯಿತು.
ಸಚಿವರಿಂದ ಪುಷ್ಪಾರ್ಚನೆ: ರಕ್ತದಾನಕ್ಕೆ ಆಗಮಿಸಿದ ಎಲ್ಲರಿಗೂ ಸಚಿವ ಎಂಟಿಬಿ ನಾಗರಾಜ್ ಪುಷ್ಪಾರ್ಚನೆ ಮೂಲಕ ಸ್ವಾಗತ ಕೋರಿದರು. ರಕ್ತದಾನಿಗಳಿಗೆ ಲಾಹಾರ, ಪಾನೀಯ ಸೇರಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಸಮಾಜಸೇವೆಗೆ ಮೆಚ್ಚುಗೆ: ಶಿಬಿರದಲ್ಲಿ 1306 ಯೂನಿಟ್ ರಕ್ತ ಸಂಗ್ರಹವಾಗಿದ್ದು ತಾಲೂಕಿನ ಜನತೆಯ ಸಮಾಜಸೇವೆಯ ಮನೋಭಾವನಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಬಿಜೆಪಿ ನಗರಾಧ್ಯಕ್ಷ ಸಿ.ಜಯರಾಜ್ ಹೇಳಿದರು.