ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಗಾಯಾಳು ಅರುಣ್‌ಕುಮಾರ್ ಅವರ ಯೋಗಕ್ಷೇಮ ವಿಚಾರಿಸಿದರು. ಮುಂಖಡರಾದ ಓಬಲಹಳ್ಳಿ ರಾಜಪ್ಪ, ಚಿಕ್ಕಾಹುಲ್ಲೂರು ಸತೀಶ್ , ಬಾಲು ಮತ್ತಿತರರು ಇದ್ದರು. 
ಜಿಲ್ಲೆ

ಹೊಸಕೋಟೆಯಿಂದ ವಿಧಾನಸೌಧಕ್ಕೆ ಜಾಥಾ

ಶಿವರಾಜ.ಎಂ

ಮಾಜಿ ಸಚಿವ ಎಂಟಿಬಿ ನಾಗರಾಜ್ ಎಚ್ಚರಿಕೆ

ಎಂವಿಜೆ ಆಸ್ಪತ್ರೆಯಲ್ಲಿ ಗಾಯಾಳು ಭೇಟಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ತಾಲೂಕಿನಲ್ಲಿ ಕಾಂಗ್ರೆಸ್‌ನವರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ದೌರ್ಜನ್ಯ ನಡೆಸುವುದನ್ನು ಮುಂದುವರಿಸಿದ್ದಾರೆ. ಇಲ್ಲಿನ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತಾಗಿದ್ದು, ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸಲಾಗುತ್ತಿದೆ, ಇದೆಲ್ಲ ಕೊನೆಯಾಗಬೇಕು. ಇಲ್ಲವಾದರೆ ಬಿಜೆಪಿ ಕಾರ್ಯಕರ್ತರೊಂದಿಗೆ ಹೊಸಕೋಟೆಯಿಂದ ವಿಧಾನಸೌಧದವರೆಗೆ ಪ್ರತಿಪ್ರಟನಾ ಜಾಥಾ ನಡೆಸಲಾಗುವುದು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಎಚ್ಚರಿಸಿದರು.
ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಜಯಗಳಿದ್ದು, ಇದನ್ನು ಸಹಿಸದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತ ಹುಲುವನಹಳ್ಳಿಯ ಅರುಣ್‌ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸುಧಾಕರ್ ಗೆಲುವಿನ ಹಿನ್ನೆಲೆಯಲ್ಲಿ ಅರುಣ್‌ಕುಮಾರ್ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದಾಗ ವಿನಾಕಾರಣ ಗಲಾಟೆ ಮಾಡಿ ಹತ್ತಿಪ್ಪತ್ತು ಜನರನ್ನು ಸೇರಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಅರುಣ್‌ಕುಮಾರ್ ಅವರ ಮೊಣಕಾಲು ಹಾಗೂ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದರು.
ಹಿಂದೆಯೂ ಹೀಗೆ ಇತ್ತು: 2004ರಲ್ಲಿ ಮೊದಲ ಬಾರಿಗೆ ಹೊಸಕೋಟೆಗೆ ನಾನು ಶಾಸಕನಾಗಿ ಬಂದಾಗ ಇದಕ್ಕಿಂತ ಕೆಟ್ಟ ಪರಿಸ್ಥಿತಿ ಇತ್ತು. ಚುನಾವಣೆ ವೇಳೆ ಬೂತ್‌ಗಳಲ್ಲಿ ಏಜೆಂಟರ್‌ಗಳನ್ನು ಕೂರಿಸಲು ಬಿಡುತ್ತಿರಲಿಲ್ಲ, ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಹಿಂಬಾಲಕರು ನಮ್ಮ ಕಡೆಯ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದರು. ನಾನು ಶಾಸಕನಾದ ಮೇಲೆ ಎಲ್ಲವನ್ನು ನಿಯಂತ್ರಣಕ್ಕೆ ತಂದು ದೌರ್ಜನ್ಯಕ್ಕೆ ಬ್ರೇಕ್ ಹಾಕಿದ್ದೆ. ಈಗ ಮತ್ತೆ ತಾಲೂಕಿನಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಇಂಥ ಸಾಕಷ್ಟು ಪ್ರಕರಣ ನಡೆದಿವೆ. ಲೋಕಸಭಾ ಚುನಾವಣೆ ವೇಳೆಯೂ ನಡೆದಿದೆ. ಈಗ ಲಿತಾಂಶ ಹೊರಬೀಳುತ್ತಿದ್ದಂತೆ ಮತ್ತೆ ಇಂಥ ಪ್ರಕರಣಗಳು ಮರುಕಳಿಸುತ್ತಿವೆ ಎಂದು ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ವಿಚಾರಕ್ಕೆ ಹಲ್ಲೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವಿನ ಸಂಭ್ರಮ ಆಚರಿಸಲು ಗ್ರಾಮದಲ್ಲಿ ಪಟಾಕಿ ಹೊಡೆಯುತ್ತಿದ್ದೆವು. ಆಗ ಕಾಂಗ್ರೆಸ್ ಕಾರ್ಯಕರ್ತರು ಸಣ್ಣ ವಿಚಾರಕ್ಕೆ ಜಗಳ ತೆಗೆದರು. ಅಲ್ಲದೆ ಹೋಬಳಿಯಿಂದ ಹತ್ತಿಪ್ಪತ್ತು ಮಂದಿಯನ್ನು ಸ್ಥಳಕ್ಕೆ ಕರೆಸಿ ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿದರು. ಪ್ರಾಣ ಉಳಿದಿರುವುದೇ ಹೆಚ್ಚು. ಮೊಣಕಾಲಿಗೆ ಹಾಗೂ ತಲೆಗೆ ತೀವ್ರ ಗಾಯವಾಗಿದೆ ಎಂದು ಗಾಯಾಳು ಅರುಣ್‌ಕುಮಾರ್ ಅಳಲು ತೋಡಿಕೊಂಡರು.