ಜಿಲ್ಲೆ

ಶರತ್ ಬಚ್ಚೇಗೌಡ ಮತ್ತು ಎಂ.ಟಿ.ಬಿ ನಾಗರಾಜ್​ ಬೆಂಬಲಿಗರ ಗಲಾಟೆ; ಮತ್ತೆ ಸಮಸ್ಯೆ ಆದ ಆಮಂತ್ರಣ ಪತ್ರಿಕೆ…

Webdesk - Athul Damale

ದೇವನಹಳ್ಳಿ: ಚುನಾವಣೆ ಹತ್ತಿರ ಬರುತ್ತಿದ್ದಂತೆಯೆ ರಾಜಕೀಯ ಪಕ್ಷಗಳ ನಡುವೆ ಘರ್ಷಣೆ ನಡೆಯುವುದು ಸಹಜ. ಆರೋಪ, ಪ್ರತ್ಯಾರೋಪಗಳು ಸಾಮಾನ್ಯ. ಅದೇ ರೀತಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗಲಾಟೆ ನಡೆದಿದೆ. ರಾಜ್ಯದ ಜಿದ್ದಾಜಿದ್ದಿ ಕ್ಷೇತ್ರಗಳಲ್ಲಿ ಒಂದಾಗಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಚಿವ ಎಂ.ಟಿ.ಬಿ ನಾಗರಾಜ್​ ಬೆಂಬಲಿಗರು ಆಮಂತ್ರಣ ಪತ್ರಿಕೆಯ ಪ್ರೋಟೊಕಾಲ್ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.

ನಗರದ ಹೊರವಲಯದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಭೂಮಿ ಪೂಜೆಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಸುಧಾಕರ್ ಕೂಡ ಆಗಮಿಸಿದ್ದು, ಆರೋಗ್ಯ ಸಚಿವರ ಎದುರಲ್ಲೇ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಚಿವ ಎಂ.ಟಿ.ಬಿ ಬೆಂಬಲಿಗರು ಕಿತ್ತಾಡಿಕೊಂಡಿದ್ದಾರೆ. ಇನ್ನೂ ಆಮಂತ್ರಣ ಪತ್ರಿಕೆಯಲ್ಲಿ ಅತಿ ಹೆಚ್ಚು ಬಿಜೆಪಿ ಮುಖಂಡರ ಹೆಸರು ‌ನೋಡಿದ ಶಾಸಕ ಶರತ್ ಬಚ್ಚೇಗೌಡ ಗರಂ ಆಗಿದ್ದಾರೆ.

ವೇದಿಕೆ ಮೇಲೆ ಸಚಿವ ಎಂ.ಟಿ.ಬಿ ನಾಗರಾಜ್​ ಬೆಂಬಲಿಗರಿಗೆ ಮಾತ್ರ ಮಣೆ ಹಾಕಲಾಗಿದೆ. ನಮ್ಮ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಶಾಸಕರು ಕ್ಯಾತೆ ತೆಗದಿದ್ದಾರೆ. ಈ ವೇಳೆ ಶಾಸಕ ಶರತ್ ಬೆಂಬಲಿಗರು ವೇದಿಕೆಯ‌ ಕೆಳಭಾಗದಲ್ಲಿ ನಿಂತು ಗಲಾಟೆ ಮಾಡಿದ್ದು ಎಂ.ಟಿ.ಬಿ ಬೆಂಬಲಿಗರ ಹಾಗೂ ಶರತ್ ಬೆಂಬಲಿಗರ‌ ನಡುವೆ ನೂಕಾಟ ತಳ್ಳಾಟ ನಡೆದಿದೆ. ಗಲಾಟೆಯಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಘಟನೆ ನಡೆದ 20 ನಿಮಿಷಗಳ ನಂತರ ಕಾರ್ಯಕ್ರಮ ಆರಂಭವಾಗಿದೆ.