ಹೊಸಕೋಟೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿದರು. ಮುಖಂಡರಾದ ಹುಲ್ಲೂರು ಸತೀಶ್, ನಾಗರಾಜ್ ಇದ್ದರು. 
ಜಿಲ್ಲೆ

ಎನ್‌ಡಿಎ ಮೈತ್ರಿಗೆ ಸ್ಪಷ್ಟ ಜನಾದೇಶ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಿಜೆಪಿ ಹಾಗೂ ಮೈತ್ರಿಕೂಟದ ಭಾಗವಾದ ಎನ್‌ಡಿಎಗೆ ದೇಶದಲ್ಲಿ ಸ್ಪಷ್ಟ ಜನಾದೇಶ ಸಿಕ್ಕಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗುವ ಮೂಲಕ ಮತ್ತಷ್ಟು ಅಭಿವೃದ್ಧಿ ಕೆಲಸಗಳಿಗೆ ಚುರುಕು ನೀಡಲಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆಯಲ್ಲಿ ಬುಧವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು, ಮೋದಿ ಅವರ ಬಲಿಷ್ಟ ಆಡಳಿತ ದೇಶದ ಭದ್ರತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ಮತ್ತೆ ಎನ್‌ಡಿಎ ಆಡಳಿತ ಬಯಸಿದ್ದಾರೆ ಎಂದು ಹೇಳಿದರು.
ನಿರೀಕ್ಷೆಗೂ ಮೀರಿ ಬಹುಮತ: 8 ಕ್ಷೇತ್ರಗಳನ್ನೊಳಗೊಂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ನಿರೀಕ್ಷೆಗೂ ಮೀರಿ ಬಹುಮತ ಪಡೆದು ಸಂಸದರಾಗಿ ಆಯ್ಕೆಯಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೆಲವು ಲಿತಾಂಶ ಪೂರ್ವ ಸಮೀಕ್ಷೆಗಳಲ್ಲಿ ಸುಧಾಕರ್ ಸೋಲು ಎಂಬಂತೆ ಬಿಂಬಿತವಾಗಿದ್ದವು. ಆದರೆ ನಮಗೆ ಸಂಪೂರ್ಣ ನಂಬಿಕೆ ಇತ್ತು. ಮೋದಿ ಅಲೆ, ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸುಧಾಕರ್ ವರ್ಚಸ್ಸು ಈ ಬಾರಿ ಕ್ಷೇತ್ರದಲ್ಲಿ ಮತದಾರರು ಕೈಹಿಡಿಯಲಿದ್ದಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆವು ಎಂದರು. ಗ್ರಾಮಾಂತರ ಜಿಲ್ಲೆಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸುಧಾಕರ್ ಅವರು ಹೆಚ್ಚು ಶ್ರಮವಹಿಸಲಿ ಇದಕ್ಕೆ ಬಿಜೆಪಿ ಹಾಗೂ ಜೆಡಿಎಸ್‌ನ ಎರಡೂ ಪಕ್ಷದ ಕಾರ್ಯಕರ್ತರು ಒತ್ತಾಸೆಯಾಗಿ ಇರಲಿದ್ದಾರೆ ಎಂದರು.