ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಹುಮತದೊಂದಿಗೆ ರಾಜ್ಯದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಕಳೆದ ಮೂರು ತಿಂಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿಲ್ಲ. ರಾಜ್ಯದ ಆಡಳಿತ ಯಂತ್ರ ನಿಷ್ಕ್ರಿಯಗೊಂಡಿರುವುದು ಎದ್ದು ಕಾಣುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಟೀಕಿಸಿದರು.
ಗರುಡಾಚಾರ್‌ಪಾಳ್ಯದ ಗೃಹಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಬಿಡಿಎ, ಬಿಬಿಎಂಪಿಗಳಲ್ಲಿ ಸಾರ್ವಜನಿಕರು ಸಣ್ಣ ಕೆಲಸಕ್ಕೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿದ್ದು, ರೈತಾಪಿ ಜನರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಸರ್ಕಾರ ತಟಸ್ಥ ನೀತಿ ಅನುಸರಿಸುತ್ತಿರುವುದರಿಂದ ಆಡಳಿತ ಯಂತ್ರ ಸ್ತಬ್ಧಗೊಂಡಿರುವುದು ಗೋಚರವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಗರದ ಉಸ್ತುವಾರಿ ವಹಿಸಿಕೊಂಡಿದ್ದರೂ ರಾಜ್ಯ ರಾಜಧಾನಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳೂ ನಡೆಯುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ರಾಜ್ಯದ ಪರಿಸ್ಥಿತಿ ಡೋಲಾಯಮಾನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಪರದಾಟ:
ಪ್ರತಿದಿನ ಗುತ್ತಿಗೆದಾರರು ಬಾಕಿ ಬಿಲ್ ಪಾವತಿಸುವಂತೆ ಸರ್ಕಾರಕ್ಕೆ ಮೊರೆ ಇಡುತ್ತಿದ್ದಾರೆ. ಆದರೆ ಸರ್ಕಾರ ಗುತ್ತಿಗೆದಾರರ ಅಳಲು ಕೇಳುತ್ತಿಲ್ಲ. ಇದರಿಂದ ಅವರು ಬೀದಿಗೆ ಬೀಳುವಂತಾಗಿದೆ. ದಕ್ಷ, ಪ್ರಮಾಣಿಕ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಾಯಕರು ಜನರ ಕಷ್ಟ ಕೇಳುವ ಗೋಜಿಗೆ ಹೋಗುತ್ತಿಲ್ಲ ಎಂದು ಎಂಟಿಬಿ ದೂರಿದರು. ಬಡ್ಡಿಗೆ ಹಣ ತಂದು ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ಬಿಲ್ ನೀಡದಿದ್ದರೆ ಅವರು ಸಾಲ ತೀರಿಸುವುದಾದರೂ ಹೇಗೆ, ಸರ್ಕಾರಕ್ಕೆ ಕಿಂಚಿತ್ತೂ ಮಾನವೀಯತೆ ಇಲ್ಲವಾಯಿತೇ ಎಂದು ಬೇಸರ ವ್ಯಕ್ತಪಡಿಸಿದರು.
ಯಾರು ಹೋಗ್ತಾರೆ ಗೊತ್ತಿಲ್ಲ:
ಇತ್ತೀಚಿನ ಕೆಲವು ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನಿಂದ ವಲಸೆ ಬಂದ ಬಿಜೆಪಿ ನಾಯಕರು ಮತ್ತೆ ಕಾಂಗ್ರೆಸ್‌ಗೆ ಹಿಂತಿರುಗುತ್ತಿದ್ದಾರೆ ಎಂಬ ಮಾತು ಹರಿದಾಡುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂಟಿಬಿ ಯಾರು ಹೋಗ್ತಾರೆ, ಯಾರು ಇರ‌್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಲವು ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ನಾನೂ ಮಾಹಿತಿ ಪಡೆಯಲು ಯತ್ನಿಸುತ್ತಿದ್ದೇನೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.