ಗರುಡಾಚಾರ್‌ಪಾಳ್ಯದಲ್ಲಿ ಮಂಗಳವಾರ ಎಂಟಿಬಿ ವಾಲಿಬಾಲ್ ಪಂದ್ಯಾವಳಿಗೆ ಆಯೋಜಕರು ಸಚಿವರಿಗೆ ಆಹ್ವಾನ ನೀಡಿದರು. ಆಯೋಜಕರಾದ ಸೂರಿಯಾದವ್, ಹನುಮರಾಜ್, ಚಂದ್ರು, ರಮೇಶ್‌ಬೀರಪ್ಪ ಇದ್ದರು. 
ಜಿಲ್ಲೆ

ಸಾಮಾಜಿಕ ಕಾರ್ಯಗಳ ಮೂಲಕ ಜನ್ಮದಿನ ಸಾರ್ಥಕ: ಸಚಿವ ಎಂಟಿಬಿ ನಾಗರಾಜ್ ಹೇಳಿಕೆ

Bengaluru Rural

ಬೆಂಗಳೂರು ಗ್ರಾಮಾಂತರ: ಜನ್ಮದಿನ ಆಚರಣೆ ಕುಟುಂಬಕ್ಕೆ ಸೀಮಿತವಾಗಬಾರದು, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಆ ದಿನ ಸಾರ್ಥಕವಾಗುವಂತಾಗಬೇಕೆಂಬ ನಿಟ್ಟಿನಲ್ಲಿ ಜು.20ರಂದು ತಾಲೂಕಿನಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.


ಗರುಡುಚಾರ್‌ಪಾಳ್ಯದ ಗೃಹ ಕಚೇರಿಯಲ್ಲಿ ಮಂಗಳವಾರ ಅಭಿಮಾನಿಗಳು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.


ಕಳೆದೆರಡು ವರ್ಷದಿಂದ ಕೋವಿಡ್ ಹಿನ್ನೆಲೆಯಲ್ಲಿ ಜನ್ಮದಿನ ಆಚರಣೆ ಸಾಧ್ಯವಾಗಿರಲಿಲ್ಲ, ಈ ಬಾರಿ ತಾಲೂಕಿನ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಹೊಸಕೋಟೆ ತಾಲೂಕು ನನ್ನ ಕರ್ಮಭೂಮಿ, ಇಲ್ಲಿನ ಎಲ್ಲ ಜನರು ನನ್ನ ಬಂಧು ಬಾಂಧವರು. ಎಲ್ಲ ಸಮುದಾಯಗಳ ವಿಶ್ವಾಸ ಪ್ರೀತಿಯಿಂದಾಗಿ ನನಗೆ ಜನಸೇವೆ ಮಾಡುವ ಭಾಗ್ಯ ಸಿಕ್ಕಿದೆ. ಅದನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹೊಸಕೋಟೆ ತಾಲೂಕಿನಲ್ಲಿ ಮೆಟ್ರೋ ವಿಸ್ತರಣೆ, ಶಾಶ್ವತ ನೀರಾವರಿ ಯೋಜನೆ ಸೇರಿ ಸ್ಮಾರ್ಟ್ ಸಿಟಿ ಕನಸುಕಂಡಿದ್ದು, ಜನರ ಆಶೀರ್ವಾದವಿದ್ದರೆ ಇವೆಲ್ಲವೂ ಸಾಕಾರಗೊಳ್ಳಲಿವೆ ಎಂದರು.


ಬಡವರಿಗೆ ಬೆಡ್‌ಶೀಟ್, ಸೀರೆ, ಸಿಹಿಹಂಚಿಕೆ: ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ಅನ್ನದಾನ, ಸಿಹಿಹಂಚಿಕೆ ಜತೆಗೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ ಸುಮಾರು 50 ಸಾವಿರ ಬಡಕುಟುಂಬಕ್ಕೆ ಬೆಡ್‌ಶೀಟ್ ಹಾಗೂ ಮಹಿಳೆಯರಿಗೆ ಸೀರೆ ವಿತರಣೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಿಹಿಹಂಚುವ ಮೂಲಕ ನೆಚ್ಚಿನ ನಾಯಕನ ಹುಟ್ಟುಹಬ್ಬ ಆಚರಣೆಗೆ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ಇದರೊಂದಿಗೆ ತಾಲೂಕಿನ ಎಲ್ಲ ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಿಗೆ ನೋಟ್‌ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಎಂಟಿಬಿ ವಾಲಿಬಾಲ್ ಕಪ್: ಹೊಸಕೋಟೆ ತಾಲೂಕಿನ ವೆಂಕಟಾದ್ರಿ ಮಠ ಪಿಲ್ಲಗುಂಪೆ ಆವರಣದಲ್ಲಿ ಜು.20ರಂದು ಎಂಟಿಬಿ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಹೊನಲು ಬೆಳಕಿನ ಪುರುಷರು ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ಇದಾಗಿದ್ದು, ವಿಜೇತರಿಗೆ ಪ್ರಥಮ ಬಹುಮಾನ 50 ಸಾವಿರ ರೂ.ನಗದು ಹಾಗೂ ದ್ವಿತೀಯ 25 ಸಾವಿರ ರೂ.ನಗದು ವಿತರಿಸಲಾಗುವುದು. ಹೊಸಕೋಟೆ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಸತೀಶ್, ಮುಖಂಡರಾದ ಕುಮಾರ್, ಸೂರಿಯಾದವ್, ಹನುಮರಾಜ್, ಚಂದ್ರು, ರಮೇಶ್‌ಬೀರಪ್ಪ ಆಯೋಜನೆ ಹೊಣೆ ಹೊತ್ತಿದ್ದು, ಪಂದ್ಯಾವಳಿ ವೇಳೆಯಲ್ಲಿಯೇ ಸ್ಥಳದಲ್ಲಿ ಕೇಕ್ ಕತ್ತರಿಸುವ ಮೂಲಕ ಸಚಿವರ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.