ಜಿಲ್ಲೆ

ಪ್ರತಿಪಕ್ಷಗಳಿಂದ ರೈತರನ್ನು ದಿಕ್ಕು ತಪ್ಪಿಸುವ ಕೆಲಸ: ಸಚಿವ ಎಂಟಿಬಿ ನಾಗರಾಜ್

Bengaluru Rural

ಬೆಂಗಳೂರು ಗ್ರಾಮಾಂತರ: ಕೇಂದ್ರ ಸರ್ಕಾರ ರೈತಪರವಾದ ಅನೇಕ ಉಪಯುಕ್ತ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಆರೋಪ ಮಾಡುತ್ತಾ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದರಲ್ಲಿ ಹುರುಳಿಲ್ಲ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.


ಗರುಡಾಚಾರ್‌ಪಾಳ್ಯದ ಸಚಿವರ ಕಚೇರಿಯಲ್ಲಿ ಬುಧವಾರ ‘ಕೇಂದ್ರ ಸರ್ಕಾರದ ರೈತಪರ ಯೋಜನೆಗಳು’ ಕುರಿತ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.


ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದು 8 ವರ್ಷ ಪೂರೈಸಿದೆ. ಈ ಅವಧಿಯಲ್ಲಿ ರೈತರ ಶ್ರೇಯೋಭಿವೃದ್ಧಿ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಅನುಷ್ಠಾನದಲ್ಲೂ ಯಶಸ್ವಿಯಾಗಿದೆ. ಸರ್ಕಾರದ ಸಾಧನೆಯನ್ನು ಸಹಿಸದ ಪ್ರತಿಪಕ್ಷಗಳು ಇಲ್ಲಸಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಆದ್ದರಿಂದ ಸರ್ಕಾರ ರೂಪಿಸಿದ ಯೋಜನೆಗಳೇನು, ಇದರ ಸಾಧನೆ ಏನು ಎಂಬುದರ ಸಂಪೂರ್ಣ ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿದ್ದು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.


ಅನುದಾನ ಹಾಗೂ ಅನುಷ್ಠಾನ: ರೈತರಲ್ಲದೆ ಎಲ್ಲ ವರ್ಗದ ಜನರ ಒಳಿತಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಗಳು ಇದರಲ್ಲಿ ಬಿಡುಗಡೆಯಾದ ಅನುದಾನ ಹಾಗೂ ಅನುಷ್ಠಾನಗೊಂಡ ಕಾರ್ಯಕ್ರಮಗಳ ಬಗ್ಗೆ ಶೀಘ್ರದಲ್ಲೇ ಮತ್ತೊಂದು ಕರಪತ್ರ ಹೊರತರಲಿದ್ದು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ತಾಲೂಕಿನಲ್ಲಿ ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಚಿವರು ಸೂಚಿಸಿದರು.


ಹೇಗೆ ಎಲ್ಲಿ ಎಂಬುದರ ಬಗ್ಗೆ ತಿಳಿಸಬೇಕು: ವಾಜಪೇಯಿ ಅವಧಿಯಲ್ಲೇ ಭಾರತ ಪ್ರಕಾಶಿಸಲು ಆರಂಭಿಸಿತ್ತು, ಮೋದಿ ಅವಧಿಯಲ್ಲಿ ಮತ್ತಷ್ಟು ಪ್ರಕಾಶಿಸುತ್ತಿದೆ ಅಂದರೆ ದೇಶದಲ್ಲಿ ಅಭಿವೃದ್ಧಿಯ ವೇಗ ಹೇಗಿದೆ ಎಂಬುದು ಗೊತ್ತಿದೆ. ಆದರೂ ಈ ಬಗ್ಗೆ ಸಾಕಷ್ಟು ಜನರಲ್ಲಿ ಅರಿವಿಲ್ಲ, ಆದ್ದರಿಂದ ಭಾರತ ಹೇಗೆ ಎಲ್ಲಿ ಪ್ರಕಾಶಿಸುತ್ತಿದೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಲೋಕೇಶ್‌ಗೌಡ ಹೇಳಿದರು.