ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಬೃಹತ್ ಜನೋತ್ಸವ ಸಮಾವೇಶದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡೋಣ ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ನಗರದ ಕನಕ ಭವನದಲ್ಲಿ ಜನೋತ್ಸವ ಆಯೋಜನೆ ಬಗ್ಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಹಾಗೂ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 18ರಂದು ದೊಡ್ಡಬಳ್ಳಾಪುರದ ರಘುವನಹಳ್ಳಿ ಬಳಿ ‘ಜನೋತ್ಸವ’ ಸಾರ್ಥಕ ಸೇವೆ ಮತ್ತು ಸಬಲೀಕರಣ’ ಹೆಸರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಹೊಸಕೋಟೆ ತಾಲೂಕಿನ ಎಲ್ಲ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು. ಸಮಾವೇಶ ಪಕ್ಷ ಸಂಘಟನೆಗೆ ದೊಡ್ಡಮಟ್ಟದ ಬೂಸ್ಟರ್ ಆಗಲಿದೆ, ಮುಂದಿನ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದರು.
ಇಡೀ ದೇಶದಲ್ಲಿ ಬಿಜೆಪಿ ಆಡಳಿತ: ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದರೊಂದಿಗೆ ದೇಶದ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರ ಗದ್ದುಗೆ ಏರುವಂತಾಗಬೇಕು, ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರ ಮನೆಬಾಗಿಲಿಗೆ ಮುಟ್ಟಿಸಬೇಕು ಎಂದು ಎಂಟಿಬಿ ಕರೆ ನೀಡಿದರು.
ಒಂದು ದಿನ ವಾಹನಗಳಿಗೆ ರೆಸ್ಟ್ ಕೊಡ್ರಪ್ಪ: ಸಮಾವೇಶದ ಹಿನ್ನೆಲೆಯಲ್ಲಿ ತಾಲೂಕಿನಿಂದ 250ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ, ಆದ್ದರಿಂದ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರು ಬಸ್‌ಗಳಲ್ಲೇ ಬಂದು ಹಿಂತಿರುಗಬೇಕು ಎಂದ ಸಚಿವ ಎಂಟಿಬಿ ಒಂದು ದಿನ ನಿಮ್ಮ ಸ್ವಂತ ವಾಹನಗಳಿಗೆ ರೆಸ್ಟ್ ಕೊಡ್ರಪ್ಪ ಎಂದು ನಗೆಚಟಾಕಿ ಹಾರಿಸಿದರು. ತಾಲೂಕಿನಿಂದ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದು ಪ್ರತಿ ಗ್ರಾಮ ಪಂಚಾಯಿತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಸೂಲಿಬೆಲೆ, ನಂದಗುಡಿ ಅನುಗೊಂಡನಹಳ್ಳಿ ಸೇರಿ ಹೋಬಳಿ ವ್ಯಾಪ್ತಿಯ ಮುಖಂಡರು ಕಾರ್ಯಕರ್ತರನ್ನು ಕರೆತರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಕಾರ್ಯಕ್ರಮಕ್ಕೆ ಬಂದು ವಾಪಸ್ ಅವರವರ ಮನೆಗಳಿಗೆ ತಲುಪುವವರೆಗೆ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.
ಸಿದ್ದರಾಮೋತ್ಸವಕ್ಕೂ ಜನೋತ್ಸವಕ್ಕೂ ಹೋಲಿಕೆ ಇಲ್ಲ: ಸಿದ್ದರಾಮೋತ್ಸವ ಕೇವಲ ವ್ಯಕ್ತಿ ಆಧಾರಿತ ಉತ್ಸವ ಆಗಿದ್ದು ಜನೋತ್ಸವ ರಾಜ್ಯದ 3 ವರ್ಷ ಬಿಜೆಪಿ ಸರ್ಕಾರ ಹಾಗೂ ಬೊಮ್ಮಾಯಿ ಆಡಳಿತದಲ್ಲಿ ಮಾಡಿದ ಅಭಿವೃದ್ಧಿಯನ್ನು ಜನತೆ ಸ್ವೀಕರಿಸಿರುವ ಕುರಿತು ಆಚರಿಸುತ್ತಿರುವ ಉತ್ಸವಾಗಿದೆ ಎಂದು ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.