ಜಿಲ್ಲೆ

ಬೆಂಬಲ ಬೆಲೆ ಯೋಜನೆಯಡಿ ಕುಸುಬೆ ಖರೀದಿ ಕೇಂದ್ರ ಶೀಘ್ರ ತೆರೆದು ಖರೀದಿಸಲು ಸೂಚನೆ

Gadag - Shivanand Hiremath

ಗದಗ: ಬೆಂಬಲ ಬೆಲೆ ಯೋಜನೆಯಡಿ ಕುಸುಬೆ ಖರೀದಿಗೆ ಸರ್ಕಾರ ಆದೇಶಿಸಿದೆ. ಶೀಘ್ರವೇ ಜಿಲ್ಲೆಯಲ್ಲಿ  ಕುಸುಬೆ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆದು ರೈತರು ಬೆಳೆದ ಕುಸುಬೆ ಖರೀದಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.    

ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಶುಕ್ರವಾರದಂದು ಜರುಗಿದ ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೃಷಿ ಹುಟ್ಟುವಳಿಯಾದ ಕುಸುಬೆ ಉತ್ಪನ್ನ ಖರೀದಿಸುವ ಜಿಲ್ಲಾ ಟಾಸ್ಕ್‍ಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.

ಬೆಂಬಲ ಬೆಲೆಯ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಖರೀದಿ ಕೇಂದ್ರದ ಮುಂದೆ ಬ್ಯಾನರ್ ಅಳವಡಿಸಬೇಕು. ಕರಪತ್ರಗಳ ಮುದ್ರಣ ಸೇರಿದಂತೆ ವ್ಯಾಪಕ ಪ್ರಚಾರ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಲಾಭ ಪಡೆದುಕೊಳ್ಳುವಂತೆ  ಕ್ರಮ  ವಹಿಸಬೇಕೆಂದು ಸೂಚಿಸಿದರು. ಸರ್ಕಾರದ ಆದೇಶದ ದಿನದಿಂದ ರೈತರ ನೋಂದಣಿ 45 ದಿನಗಳವರೆಗೆ ಹಾಗೂ ನೋಂದಣಿ ಕಾರ್ಯದ ಜೊತೆಯಲ್ಲಿಯೇ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿ ರಾಜ್ಯದಲ್ಲಿ ನ್ಯಾಪೆಡ್ ಸಂಸ್ಥೆಯ ಮೂಲಕ ಖರೀದಿಸಲು ಸರ್ಕಾರ ತಿಳಿಸಿದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ ಗರಿಷ್ಟ 5 ಕ್ವಿಂಟಾಲ್‍ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ಕುಸುಬೆಯನ್ನು ಖರೀದಿಸಲು ತಿಳಿಸಿದೆ. ನೋಂದಣಿ ಮಾಡಿಸಿದ ರೈತರುಗಳಿಗೆ ನಿಗದಿತ ದಿನದಂದು ಕುಸುಬೆ ಹುಟ್ಟುವಳಿ ತರಲು ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.        

ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಕೆ.ಲಕ್ಷಾಣಿ ಅವರು ಸಭೆಗೆ ಮಾಹಿತಿ ಒದಗಿಸುತ್ತಾ ಸರ್ಕಾರದ ಆದೇಶದನ್ವಯ ರಾಜ್ಯದಲ್ಲಿ ನ್ಯಾಪೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಹಾಗೂ  ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ ಬೆಂಗಳೂರು ಇವರನ್ನು ರಾಜ್ಯ ಮಟ್ಟದ ಖರೀದಿ ಏಜೆನ್ಸಿಯನ್ನಾಗಿ ನೇಮಿಸಿದೆ ಎಂದರು.  

ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕುಸುಬೆಯನ್ನು ಬೆಳೆದಿದ್ದು ಪ್ರಸುತ ಮಾರುಕಟ್ಟೆ ದರವು ಪ್ರತಿ ಕ್ವಿಂಟಲ್‍ಗೆ  ರೂ.3200 ರಿಂದ 4000ರವರೆಗೆ ಇದ್ದು,ಸರಾಸರಿ ರೂ 3800 ಇರುತ್ತದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಕುಸುಬೆ ಹುಟ್ಟುವಳಿಗೆ ಪ್ರತಿ ಕ್ವಿಂಟಲ್‍ಗೆ ರೂ. 5650 ರೂ.ಗಳಂತೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಿದೆ. ಜಿಲ್ಲೆಯ 3 ತಾಲುಕುಗಳಾದ ಗದಗ ತಾಲೂಕಿನಲ್ಲಿ ಬಳಗಾನೂರ, ಹೊಂಬಳ ; ಶಿರಹಟ್ಟಿ ತಾಲೂಕಿನ ರಣತೂರ, ರೋಣ ತಾಲೂಕಿನ ಅಬ್ಬಿಗೇರಿ, ಸೂಡಿ, ನಿಡಗುಂದಿಗಳಲ್ಲಿ ಖರೀದಿ ಕೇಂದ್ರ ತೆರೆಯಲು ತೀರ್ಮಾನಿಸಲಾಯಿತು.  

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಗಂಗಪ್ಪ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು, ಸಹಕಾರ ಇಲಾಖೆ ಉಪನಿಬಂಧಕರು, ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿ., ದ ಮುಖ್ಯಸ್ಥರು ಹಾಜರಿದ್ದರು.