ಹುಬ್ಬಳ್ಳಿ: ರೈತರ ಒತ್ತಾಸೆಯಂತೆ ಆರಂಭವಾಗಿದ್ದ ಧಾರವಾಡ ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ಇದೀಗ ಹೆಸರು ಬೆಳೆಗಾರರು ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ.
ಎಫ್ಎಕ್ಯೂ (ಫೇರ್ ಆವರೇಜ್ ಕ್ವಾಲಿಟಿ) ಗುಣಮಟ್ಟ ಇಲ್ಲವೆಂದು ಹೆಸರುಕಾಳು ಖರೀದಿಸಲು ಹಿಂದೇಟು ಹಾಕುತ್ತಿರುವುದರಿಂದ ತಡವಾಗಿಯಾದರೂ ಉತ್ತಮ ದರದ ನಿರೀಕ್ಷೆಯಲ್ಲಿ ಖರೀದಿ ಕೇಂದ್ರಕ್ಕೆ ಬಂದ ರೈತರು ಪೆಚ್ಚು ಮೋರೆ ಹಾಕಿಕೊಂಡು ವಾಪಸ್ ಹೋಗುವಂತಾಗಿದೆ. ಇದರಿಂದಾಗಿ ಕಾಡಿಬೇಡಿ ಪಡೆದಿದ್ದ ಖರೀದಿ ಕೇಂದ್ರಗಳು ರೈತರ ಪಾಲಿಗೆ ಇದ್ದೂ ಇಲ್ಲದಂತಾಗುತ್ತಿವೆ.
ಕಳೆದ ಸೆಪ್ಟೆಂಬರ್ ನಲ್ಲಿ ಖರೀದಿ ಕೇಂದ್ರ ಆರಂಭವಾಗಿದ್ದರೂ ಇದುವರೆಗೆ ಬರೀ ರೈತರ ನೋಂದಣಿಯಲ್ಲಿಯೇ ಸರ್ಕಾರ ಕಾಲ ಕಳೆದಿದೆ. ಇಷ್ಟು ದಿನ ನೋಂದಣಿ ಮಾಡಿಕೊಂಡು ಇದೀಗ ನೋಂದಾಯಿತ ರೈತರಿಗೆ ಸ್ಯಾಂಪಲ್ ತೆಗೆದುಕೊಂಡು ಬರಲು ಹೇಳಲಾಗುತ್ತಿದೆ. ಹೀಗೆ ಸ್ಯಾಂಪಲ್ ತಂದ ಬಹುತೇಕ ರೈತರ ಹೆಸರುಕಾಳು ರಿಜೆಕ್ಟ್ ಆಗುತ್ತಿವೆ. ಡ್ಯಾಮೇಜ್ ಇವೆ, ಕಪ್ಪಾಗಿವೆ ಎಂದು ಅವುಗಳನ್ನು ತಿರಸ್ಕರಿಸಲಾಗುತ್ತಿದೆ.
ಈ ವರ್ಷ ಅತಿಯಾದ ಮಳೆಯಿಂದಾಗಿ ಹೆಸರುಕಾಳು ಒಂದಿಷ್ಟು ಕಪ್ಪಾಗಿರುವುದು ನಿಜ. ಆದರೆ, ಸರ್ಕಾರ ಎರಡು ಗ್ರೇಡ್ ಗಳನ್ನು ಮಾಡಿ ಗುಣಮಟ್ಟಕ್ಕೆ ತಕ್ಕಂತೆ ದರ ನಿಗದಿ ಮಾಡಿ ಖರೀದಿ ಮಾಡಬೇಕೆಂದು ರೈತರು ಆಗಿನಿಂದಲೂ ಕೇಳುತ್ತಲೇ ಇದ್ದಾರೆ. ಆದರೆ, ಸ್ಪಂದನೆ ಸಿಗದಂತಾಗಿದೆ.
ಯಾರಿಗಾಗಿ ಖರೀದಿ ಕೇಂದ್ರ?:
ಹೆಸರುಕಾಳಿನ ಹಂಗಾಮು ಆಗಸ್ಟ್- ಸೆಪ್ಟೆಂಬರ್ ನಲ್ಲಿ ಮುಗಿದು ಹೋಗುತ್ತದೆ. ಬಹಳಷ್ಟು ರೈತರು ಆಗಲೇ ಕೈಗೆ ಬಂದ ದರಕ್ಕೆ ಮಾರಾಟ ಮಾಡುತ್ತಾರೆ. ಈಗಾಗಲೇ ರೈತರಿಂದ ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಕಡಿಮೆ ದರಕ್ಕೆ ಖರೀದಿ ಮಾಡಿದ್ದಾರೆ. ಕೆಲವು ರೈತರು ಮಾತ್ರ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಅವರಿಗೆ ಈಗ ಗುಣಮಟ್ಟ ಇಲ್ಲವೆಂಬ ಸಬೂಬು ನುಂಗಲಾರದ ತುತ್ತಾಗಿದೆ. ಇದರಿಂದ ಹೋರಾಟದ ಲವಾಗಿ ಆರಂಭವಾಗಿರುವ ಖರೀದಿ ಕೇಂದ್ರಗಳು ಯಾರಿಗೆ ಲಾಭ ಮಾಡಿಕೊಡಲಿವೆಯೋ ಎಂಬ ಸಂಶಯ ರೈತ ಸಮೂಹವನ್ನು ಕಾಡುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಗುರಿ ಮೀರಿ ರೈತರು 97,406 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಮಳೆರಾಯನ ಅವಕೃಪೆಯಿಂದ ಹೆಸರು ಬೆಳೆ ಹಾನಿಗೊಳಗಾಯಿತು. ಬಂದಿರುವ ಒಂದಿಷ್ಟು ಹೆಸರು ಗುಣಮಟ್ಟದಲ್ಲಿ ಕಡಿಮೆ ಇದೆ. ಹಾಗಾಗಿಯೇ ರೈತರು ಎರಡು ಗ್ರೇಡ್ ಮಾಡಿ ಖರೀದಿ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ. ಎಫ್ಎಕ್ಯೂ ಗುಣಮಟ್ಟದ ಹೆಸರು ಪ್ರತಿ ಕ್ವಿಂಟಲ್ಗೆ 8,768 ರೂ., ಉದ್ದು 7,800 ರೂ. ನಿಗದಿ ಮಾಡಲಾಗಿದೆ.
ಖರೀದಿ ಕೇಂದ್ರಗಳು:
ಧಾರವಾಡ ತಾಲೂಕಿನ ಧಾರವಾಡ, ಉಪ್ಪಿನಬೆಟಗೇರಿ, ಹೆಬ್ಬಳ್ಳಿ. ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ, ಬ್ಯಾಹಟ್ಟಿ, ಹೆಬಸೂರ, ಕೋಳಿವಾಡ, ನೂಲ್ವಿ. ನವಲಗುಂದ ತಾಲೂಕಿನ ಹೆಬ್ಬಾಳ, ತಿರ್ಲಾಪೂರ, ಆರೇಕುರಹಟ್ಟಿ, ಶಿರೂರ, ಮೊರಬ, ಹಾಲಕುಸುಗಲ್, ನವಲಗುಂದ, ಅಣ್ಣಿಗೇರಿ, ಶಿರಕೋಳ, ಅಣ್ಣಿಗೇರಿ ತಾಲೂಕಿನ ಅಣ್ಣಿಗೇರಿ, ಕುಂದಗೋಳ ತಾಲೂಕಿನ ಯಲಿವಾಳ, ಯರಗುಪ್ಪಿಯಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ.