ಜಿಲ್ಲೆ

ಸರ್ಕಾರಿ ಆಸ್ಪತ್ರೆ ಚಿಕಿತ್ಸಾ ಸೌಲಭ್ಯ ಜನರಿಗೆ ತಲುಪಿಸಿ; ಸಚಿವ ಸತೀಶ ಹಾರಕಿಹೊಳಿ ಸೂಚನೆ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ:ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ತಕ್ಷಣವೇ ಸ್ಪಂದಿಸಿ ಚಿಕಿತ್ಸೆ ನೀಡುವ ಕೆಲಸಗಳು ಆಗಬೇಕು. ನಿರ್ಲಕ್ಷೃ ವಹಿಸುವ ವೈದ್ಯರ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಎಚ್ಚರಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ವೈದ್ಯರು, ನರ್ಸ್‌ಗಳು ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಕುರಿತು ದೂರುಗಳು ಬರುತ್ತಿವೆ. ಇದರಿಂದಾಗಿ ಜನರು ಸರ್ಕಾರಿ ಆಸ್ಪತ್ರೆಗಳಲ್ಲಿನ ಗುಣಮಟ್ಟದ ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ವಿಷಯದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಖುದ್ದಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.

ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಆದರೆ, ತಳಮಟ್ಟದಲ್ಲಿ ಅಧಿಕಾರಿಗಳು, ವೈದ್ಯರು ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಆಸ್ಪತ್ರೆಗಳಲ್ಲಿನ ವೈದ್ಯರು, ನರ್ಸ್‌ಗಳು, ಇತರೆ ಸಿಬ್ಬಂದಿ ಕೊರತೆ ನಿಗದಿಸಲು ಕ್ರಮ ವಹಿಸಲಾಗಿದೆ. ತಜ್ಞ ವೈದ್ಯರ ನೇಮಕ ಕುರಿತು ಪ್ರಸ್ತಾವನೆ ಸಲ್ಲಿಸಬೇಕು.ಪ್ರಾಥಮಿಕ, ಸಮುದಾಯ, ತಾಲೂಕು ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಬಿಮ್ಸ್ ಆಸ್ಪತ್ರೆಯ ವೈದ್ಯರು ಮಾತನಾಡಿ, 2024 ಜನವರಿ ದಿಂದ ಅಕ್ಟೋಬರ್ ಅವಧಿಯಲ್ಲಿ ಬಿಮ್ಸ್ ಹೆರಿಗೆ ವಿಭಾಗಕ್ಕೆ 2178 ಗರ್ಭಿಣಿಯರು ದಾಖಲಾಗದ್ದಾರೆ. ಅದರಲ್ಲಿ 1840 ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಇನ್ನೂಳಿದ 338 ಪ್ರಕರಣಗಳಲ್ಲಿ ಮನೆಯಲ್ಲಿ, ಬೇರೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಬಳಿಕ ಬಿಮ್ಸ್‌ನಲ್ಲಿ ದಾಖಲಾಗಿದ್ದಾರೆ. ಆಕ್ಸಿಜನ್, ಆರ್‌ಡಿಎಸ್,ಎಂಎಎಸ್ ಸೇರಿ ವಿವಿಧ ಕಾರಣಗಳಿಂದಾಗಿ 172 ಶಿಶುಗಳು ಮೃತಪಟ್ಟಿವೆ. ಆದರೆ, ವೈದ್ಯರ ನಿರ್ಲಕ್ಷೃದಿಂದಾಗಿ ಯಾರು ಮೃತಪಟ್ಟಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಂಬರುವ ದಿನಗಳಲ್ಲಿ ಶಿಶುಗಳ ಸಾವಿನ ಪ್ರಮಾಣ ಕಡಿಮೆಯಾಗಬೇಕು. ಆಕ್ಸಿಜನ್ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಖಾಲಿ ಉಳಿದಿರುವ ತಜ್ಞ ವೈದ್ಯರ, ನರ್ಸ್‌ಗಳನ್ನು ಚಳಿಗಾಲ ಅಧಿವೇಶನದ ಒಳಗಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಶಾಸಕ ಆಸೀಫ್ ಸೇಠ್, ಜಿಪಂ ಸಿಇಒ ರಾಹುಲ ಶಿಂಧೆ ಇತರರಿದ್ದರು.