ಜಿಲ್ಲೆ

ಎಂಎಸ್‌ಜಿಪಿ ತ್ಯಾಜ್ಯಘಟಕಕ್ಕೆ ನೋಟಿಸ್?

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಳ ಹೋಬಳಿ ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಘನತ್ಯಾಜ್ಯ ಸಂಸ್ಕರಣಾ ಘಟಕದ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಅಸಮರ್ಪಕ ನಿರ್ವಹಣೆ ಹಾಗೂ ಜಲಕಾಯ್ದೆ ಆರೋಪದಡಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಘಟಕಕ್ಕೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿನ ತ್ಯಾಜ್ಯವನ್ನು ಎಂಎಸ್‌ಜಿಪಿ ಘಟಕಕ್ಕೆ ಪ್ರತಿನಿತ್ಯ ಸಾಗಿಸಲಾಗುತ್ತಿದೆ ಅಲ್ಲಿಂದ ಬಂದ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗೊಬ್ಬರ ತಯಾರಿಸುವ ಪ್ರಕ್ರಿಯೆ ನಡೆಯಬೇಕು ಆದರೆ ಈ ಪ್ರಕ್ರಿಯೆಯಲ್ಲಿ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪದಡಿ ನೋಟಿಸ್ ಜಾರಿಗೊಳಿಸಲಾಗಿದೆ.

ವರದಿ ಪರಿಗಣನೆ: ಮೇಲ್ನೋಟಕ್ಕೆ ಘನತ್ಯಾಜ್ಯ ನಿರ್ವಹಣೆ ನಿಯಮಗಳ ಉಲ್ಲಘಂನೆ ಕಾಣುತ್ತಿದೆ, ಜತೆಗೆ ತಣ್ಣೀರಹಳ್ಳಿ ಸೇರಿ ಘಟಕದ ಸುತ್ತಮುತ್ತಲ ಗ್ರಾಮಸ್ಥರು ಹಲವು ವರ್ಷಗಳಿಂದ ಈ ಬಗ್ಗೆ ದೂರು ನೀಡುತ್ತಾ ಬಂದಿದ್ದಾರೆ, ಬಿಬಿಎಂಪಿ ಲಾರಿ ಮಾಲೀಕರು ಹಾಗೂ ಗುತ್ತಿಗೆದಾರರ ದೂರು ಸಹ ಇದೆ, ದೊಡ್ಡಬಳ್ಳಾಪುರ ಪ್ರಾದೇಶಿಕ ಅಧಿಕಾರಿಗಳ ತಪಾಸಣಾ ವರದಿ ಆಧಾರವೂ ಸೇರಿ ಹಲವು ಕಾರಣಗಳಿಂದ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.

ಜು.10ಕ್ಕೆ ಚರ್ಚೆ: ಎಂಎಸ್‌ಜಿಪಿ ಘಟಕದ ಪ್ರಮುಖರು ಜು.10ರಂದು ಖುದ್ದಾಗಿ ಹಾಜರಾಗಿ ಚರ್ಚೆಯಲ್ಲಿ ಭಾಗವಹಿಸಬೇಕು ಘಟಕದಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುತ್ತಿರುವ ಬಗ್ಗೆ ಖಚಿತಪಡಿಸಬೇಕು ಇಲ್ಲದಿದ್ದರೆ ಜಲಕಾಯ್ದೆಯಂತೆ ಕ್ರಮಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಘಟಕದಲ್ಲಿ ಪ್ರತಿನಿತ್ಯ 750 ಟನ್ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ತಯಾರಿಸಲು ಅನುಮತಿ ನೀಡಲಾಗಿದೆ, ಆದರೆ ಘಟಕದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಎಂಬ ದೂರು ವ್ಯಕ್ತವಾಗಿದೆ. ಇದರಿಂದ ಪರಿಸರ ಮಾಲಿನ್ಯವಾಗುತ್ತಿದ್ದು ಗ್ರಾಮೀಣ ಪ್ರದೇಶದ ಸೊಗಡಿಗೆ ಧಕ್ಕೆಯಾಗುತ್ತಿದೆ ಇದು ಜಲಕಾಯ್ದೆ ಉಲ್ಲಂಸಿದಂತಾಗುತ್ತದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ವರ್ಷಗಳ ವಿರೋಧ: ದೊಡ್ಡಬಳ್ಳಾಪುರದ ಚಿಗರೇನಹಳ್ಳಿಯಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ ಆರಂಭವಾದ ದಿನದಿಂದಲೂ ಈ ಭಾಗದ ಸುತ್ತಮುತ್ತ ಗ್ರಾಮದ ಜನರು ಘಟಕವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇದಕ್ಕೂ ಮೊದಲು ದೊಡ್ಡಮಟ್ಟದ ಹೋರಾಟ ಪ್ರತಿಭಟನೆ ಕಂಡ ಟೆರ್ರಾಾರ್ಮಾ ಘಟಕ ಬಂದ್ ಆದ ಬಳಿಕ ಈ ಘಟಕವನ್ನು ಸಂಪೂರ್ಣ ಬಂದ್ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಲೇ ಇದೆ. ಏತನ್ಮಧ್ಯೆ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಸಮರ್ಪಕವಾಗಿಲ್ಲ, ನಿಯಮಗಳ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪ ಹೆಚ್ಚಾಗಿರುವುದು ಮತ್ತೊಂದು ಸುತ್ತಿನ ಹೋರಾಟಕ್ಕೆ ದಾರಿ ಮಾಡಕೊಡಲಿದೆ ಎಂಬ ಮಾತು ಕೇಳಿಬರುತ್ತಿದೆ.