ಜಿಲ್ಲೆ

ಕಸ ಘಟಕದ ಕಟ್ಟಡಗಳಿಗೆ ಇ-ಖಾತೆ ಇಲ್ಲ!

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು ಗುಂಡ್ಲಹಳ್ಳಿಯಲ್ಲಿ ಬಂದ್ ಆಗಿದ್ದ ಟೆರ್ರಾಾರ್ಮಾ ಕಸ ವಿಲೇವಾರಿ ಘಟಕ ಪುನಾರಂಭವಾಗುವ ಸುದ್ದಿ ಮುನ್ನೆಲೆಗೆ ಬಂದಿರುವ ನಡುವೆಯೇ ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ಘಟಕದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಿದ್ದವಾಗುತ್ತಿದೆ..!

ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಪರಿಸರ ಇಲಾಖೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪರಿಸರಕ್ಕೆ ಹಾನಿಯುಂಟು ಮಾಡುತ್ತಿರುವ ಬಗ್ಗೆ ಈಗಾಗಲೇ ವಿಷಯ ಕೋರ್ಟ್ ಮೆಟ್ಟಿಲೇರಿದೆ. ಇದರ ನಡುವೆ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಇ-ಖಾತೆ ಮಾಡಿಕೊಡುವಂತೆ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು, ಕಸ ವಿಲೇವಾರಿ ಘಟಕಕ್ಕೆ ಅಗತ್ಯವಿರುವ ಯಾವುದೇ ಅನುಮತಿ ಹಾಗೂ ಇ-ಖಾತೆ ಮಾಡಿಕೊಡದಂತೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಒಮ್ಮತದ ನಿರ್ಣಯ ಅಂಗೀಕರಿಸಲಾಗಿದೆ ಎನ್ನಲಾಗಿದೆ. ಈ ಮೂಲಕ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಿದ್ದವಾಗುತ್ತಿದ್ದು, ದೊಡ್ಡಬಳ್ಳಾಪುರ ತಾಲೂಕಿಗೆ ಅಂಟಿರುವ ಕಸದ ಕಂಟಕ ತೊಳೆಯಲು ಹೋರಾಟಗಳಿಗೆ ಮರುಜೀವ ಬಂದಂತಾಗಿದೆ.

ಹೋರಾಟದ ಇತಿಹಾಸ: ಕಳೆದ ಕೋವಿಡ್ ಕಾಲಘಟ್ಟದಲ್ಲಿ 12 ದಿನ ನಿರಂತರವಾಗಿ ನಡೆದ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಅನೇಕ ಪ್ರಹಸನಗಳು ನಡೆದವು. ಉಸ್ತುವಾರಿ ಸಚಿವರಾದಿಯಾಗಿ ಬಿಬಿಎಂಪಿ ಆಯುಕ್ತರು ಸ್ಥಳೀಯರ ಶಾಸಕರು ಪ್ರತಿಭಟಕಾರರೊಂದಿಗೆ ಸಂಧಾನ ನಡೆಸಿದರೂ ತಾರ್ಕಿಕ ಪರಿಹಾರ ಸಿಗಲಿಲ್ಲ. ಇದರ ನಡುವೆ ಪೊಲೀಸ್ ಬಲಪ್ರಯೋಗದ ಮೂಲಕ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನವೂ ನಡೆಯಿತು. ಹೋರಾಟಗಾರರ ಬಂಧನ ಬಿಡುಗಡೆಯ ಪ್ರಹಸನದಲ್ಲಿ ಇಬ್ಬರು ರೈತರು ಗಾಯಗೊಂಡಿದ್ದರು. ಕೋವಿಡ್ ಹೊಸ ಪ್ರಬೇಧ ಒಮಿಕ್ರಾನ್ ಮಾರ್ಗಸೂಚಿ ಅಸ ಪ್ರಯೋಗಿಸಿ ಪ್ರತಿಭಟನೆ ತಣ್ಣಗಾಗಿಸುವ ಪ್ರಯತ್ನವೂ ನಡೆಯಿತು. ಏತನ್ಮಧ್ಯೆ ಮೇಲ್ಮನೆ ಚುನಾವಣೆ ಕಾರಣದಿಂದ ಪ್ರತಿಭಟನಕಾ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಹೋರಾಟಗಾರರ ಕೈಕಟ್ಟಿ ಹಾಕುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು. ಪ್ರತಿ ಬಾರಿ ಚುನಾವಣೆ ವೇಳೆಗಳಲ್ಲಿ ಸದ್ದು ಮಾಡುವ ಕಸ ಘಟಕಗಳ ವಿಷಯ ಚುನಾವಣೆ ಬಳಿಕ ತಣ್ಣಗಾಗುತ್ತಾ ಬರುತ್ತವೆ. ದಶಕಗಳಿಂದಲೂ ಇದು ಪುನಾವರ್ತನೆಯಾಗುತ್ತಿದೆ.

ಇದೊಂದು ನರಕ: ದೊಡ್ಡಬಳ್ಳಾಪುರದ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ನರಕ ಸದೃಶ ಎನ್ನುವಂತ ಪರಿಸರದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ರಾಷ್ಟ್ರೀಯ ಸಾಯಿ ಕರ್ಮಚಾರಿ ಆಯೋಗದ ಭೇಟಿ ವೇಳೆ ಬೆಳಕಿಗೆ ಬಂದಿತ್ತು. ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿದ ಅಂದಿನ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ‘ಇದೊಂದು ನರಕ’ ಎಂದು ಸ್ಥಳದಲ್ಲೇ ಉದ್ಗರಿಸಿದ್ದರು. ಅದಾದ ಬಳಿಕ ಕೆಲವೊಂದಷ್ಟು ವಿದ್ಯಮಾನಗಳು ನಡೆದವು. ನಂತರದಲ್ಲಿ ಎಲ್ಲವೂ ತಣ್ಣಗಾಯಿತು. ಈ ಕಸ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಇಎಸ್‌ಐ, ಪಿಎ್ ಸೌಲಭ್ಯಗಳಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆ ತೆಗೆದುಕೊಂಡಿದ್ದರು. ಆದರೆ ಇದುವರೆಗೆ ಇಲ್ಲಿನ ಘಟಕದ ಕಾರ್ಮಿಕರ ಬಗ್ಗೆ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ ಎಂಬ ಆರೋಪ ಇದೆ.

---

11 ವರ್ಷದ ಹಿಂದೆ ಕಾಲಿಟ್ಟ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕ ಆರಂಭದಿಂದಲೂ ಸುತ್ತಮುತ್ತಲ ರೈತರ ವಿರೋಧ ಎದುರಿಸುತ್ತಲೇ ಇದೆ, ಅನೇಕ ಬಾರಿ ಪ್ರತಿಭಟನೆ ಧರಣಿಗಳೂ ನಡೆದಿವೆ, ಆದರೆ ಯಾವ ಪ್ರತಿಭಟನೆಯೂ ತಾರ್ಕಿಕ ಅಂತ್ಯ ಕಂಡಿಲ್ಲ ಎಂಬುದು ಎಂಎಸ್‌ಜಿಪಿ ವಿರುದ್ಧದ ಹೋರಾಟದ ಸರಣಿ ಪ್ರತಿಭಟನೆಗಳ ಇತಿಹಾಸ ಹೇಳುತ್ತದೆ.

ವಿಜಯ್‌ಕುಮಾರ್ ದೊಡ್ಡಬಳ್ಳಾುರ

ಈ ಭಾಗದಲ್ಲಿ ಕಸ ಸಂಸ್ಕರಣಾ ಘಟಕಕ್ಕೆ ಪಂಚಾಯಿತಿಯಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ. ಜಪಾನ್ ಮಾದರಿಯಲ್ಲಿ ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡಿ ಗೊಬ್ಬರ ತಯಾರಿಸುವ ಬಗ್ಗೆ ಮಾಹಿತಿ ನೀಡಿ ನಂತರದ ದಿನಗಳಲ್ಲಿ ಎಲ್ಲ ನಿಯಮಗಳನ್ನು ಗಾಳಿ ತೂರಿದೆ. ಇದರಿಂದ ಸುತ್ತಮುತ್ತಲ ಗ್ರಾಮದ ಪರಿಸರ ನಾಶವಾಗಿದೆ. ಕುಡಿವ ನೀರು ಕಲುಷಿತವಾಗಿದೆ.

ಶಾಂತಕುಮಾರ್, ಭಕ್ತರಹಳ್ಳಿ