ಪಟ್ಟತ್ತಿಲ್ ಸುಜಿತ್ 
ಜಿಲ್ಲೆ

ಎಂಆರ್‌ಪಿಎಲ್ ಯೋಜನೆಗಳ ವಿಭಾಗ: ಕಾರ್ಯನಿರ್ವಾಹಕ ನಿರ್ದೇಶಕರಾಗಿ ಪಟ್ಟತ್ತಿಲ್ ಸುಜಿತ್

Chethan padubidri

ಪ್ರಮುಖ ಮುಖ್ಯಾಂಶಗಳು

  • ಇವರು ಕೇರಳದ ಪಾಲಕ್ಕಾಡ್ ಮೂಲದವರು
  • ಮೂರು ದಶಕಗಳಿಗೂ ಹೆಚ್ಚು ಕಾಲ ಉದ್ಯಮದ ಅನುಭವ
  • ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ
ಮಂಗಳೂರು: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲಿರುವ ಶೆಡ್ಯೂಲ್ "ಎ" ಮಿನಿರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ ಹಾಗೂ ಓಎನ್‌ಜಿಸಿ ಸಂಸ್ಥೆಯ ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಪಟ್ಟತ್ತಿಲ್ ಸುಜಿತ್ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಯೋಜನೆಗಳು) ನೇಮಕ ಮಾಡಿದೆ.
ಈ ಉನ್ನತ ಹುದ್ದೆಗೆ ಏರುವ ಮುನ್ನ ಪಟ್ಟತ್ತಿಲ್ ಸುಜಿತ್ ಅವರು ಕಂಪನಿಯ ಗ್ರೂಪ್ ಜನರಲ್ ಮ್ಯಾನೇಜರ್ - ಕಾರ್ಪೊರೇಟ್ ಸ್ಟ್ರಾಟಜಿ (ಸಂಸ್ಥೆಯ ಕಾರ್ಯತಂತ್ರ) ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಅವಧಿಯಲ್ಲಿ ಅವರು ಕಂಪನಿಯ ಆಯಕಟ್ಟಿನ ಉಪಕ್ರಮಗಳು, ವ್ಯವಹಾರ ಯೋಜನೆ ಮತ್ತು ದೀರ್ಘಕಾಲೀನ ಬೆಳವಣಿಗೆಯ ಕಾರ್ಯತಂತ್ರಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೇರಳದ ಪಾಲಕ್ಕಾಡ್ ಮೂಲದವರಾದ ಇವರು ಮೂರು ದಶಕಗಳಿಗೂ ಹೆಚ್ಚು ಕಾಲ ಉದ್ಯಮದ ಅನುಭವ ಹೊಂದಿರುವ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. 1993ರಲ್ಲಿ ಎಂಆರ್‌ಪಿಎಲ್ ಸೇರಿದಾಗಿನಿಂದ, ಅವರು ನಿರ್ವಹಣೆ, ವಿಶ್ವಾಸಾರ್ಹತೆ, ಎಂಜಿನಿಯರಿಂಗ್ ಮತ್ತು ಪರಿಶೀಲನೆ, ಯೋಜನೆಗಳು ಮತ್ತು ಕಾರ್ಪೊರೇಟ್ ಸ್ಟ್ರಾಟಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವ್ಯಾಪಕ ಅನುಭವವನ್ನು ಗಳಿಸಿದ್ದಾರೆ.
ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಅವರು ರಿಫೈನರಿಯ ಹಂತ 1, 2 ಮತ್ತು 3ರ ಯೂನಿಟ್‌ಗಳ ಕಾರ್ಯಾಚರಣೆ, ಹಂತ 3ರ ಸಂಕೀರ್ಣಕ್ಕಾಗಿ "ಅಸೆಟ್ ಇಂಟೆಗ್ರಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್" ಸ್ಥಾಪನೆ ಮತ್ತು ಎಂಆರ್‌ಪಿಎಲ್‌ನ ಬಿಎಸ್-4 ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈಗ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಯೋಜನೆಗಳು) ಪಟ್ಟತ್ತಿಲ್ ಸುಜಿತ್ ಅವರು ಎಂಆರ್‌ಪಿಎಲ್‌ನ ವಿಸ್ತರಣೆ, ಆಧುನೀಕರಣ ಮತ್ತು ದೀರ್ಘಕಾಲೀನ ಬೆಳವಣಿಗೆಯ ಉದ್ದೇಶಗಳಿಗೆ ಅಗತ್ಯವಿರುವ ಪ್ರಮುಖ ಬಂಡವಾಳ ಯೋಜನೆಗಳು ಮತ್ತು ಮೂಲಸೌಕರ್ಯ ಉಪಕ್ರಮಗಳ ಯೋಜನೆ, ಅನುಷ್ಠಾನ ಮತ್ತು ವಿಸ್ತರಣೆಯ ನೇತೃತ್ವವನ್ನು ವಹಿಸಲಿದ್ದಾರೆ. ಇದರೊಂದಿಗೆ ಕಂಪನಿಯ ಕಾರ್ಯತಂತ್ರದ ವೈವಿಧ್ಯೀಕರಣ ಮತ್ತು ಇಂಧನ ಪರಿವರ್ತನೆ ಉಪಕ್ರಮಗಳನ್ನು ಮುನ್ನಡೆಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಎಂಆರ್‌ಪಿಎಲ್‌ನ ಪ್ರಕಟಣೆ ತಿಳಿಸಿದೆ.