ಮಂಡ್ಯ: ಮೇಲುಕೋಟೆ ಶಾಸಕ ದರ್ಶನ್ ಪತ್ನಿ ಶಿಲ್ಪಾ ಅವರ ಆರೋಗ್ಯ ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ತಾಲೂಕಿನ ಮಲ್ಲನಾಯ್ಕನಕಟ್ಟೆ ಗ್ರಾಮದ ವಿನಾಯಕ ದೇವಾಲಯದಲ್ಲಿ ಮೃತ್ಯುಂಜಯ ಹೋಮ ಸೇರಿದಂತೆ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ದುದ್ದ ಹೋಬಳಿಯ 11 ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತ ಸಂಘ ಮತ್ತು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಮಲ್ಲನಾಯ್ಕನಕಟ್ಟೆ ಗ್ರಾಮಸ್ಥರ ಸಹಯೋಗದಲ್ಲಿ ಧಾರ್ಮಿಕ ಕೈಂಕರ್ಯ ನೆರವೇರಿಸಲಾಯಿತು. ಹೊಳಲು ಗ್ರಾಮದ ದೇವಾಲಯದ ತಾಂಡವೇಶ್ವರ ದೇವಾಲಯದ ಅರ್ಚಕ ಮನೋಹರ್ ದೀಕ್ಷಿತ್ ನೇತೃತ್ವದಲ್ಲಿ ಗಣಪತಿ ಹೋಮ, ನವಗ್ರಹ ಹೋಮ ಸಹಿತವಾಗಿ ಶಿಲ್ಪಾ ಹೆಸರಿನಲ್ಲಿ ಮೃತ್ಯುಂಜಯ ಹೋಮ ನೆರವೇರಿಸಲಾಯಿತು. ಪೂಜೆ ಬಳಿಕ ಸುಮಾರು ಎರಡು ಸಾವಿರ ಜನರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಯಿತು.
ರೈತ ಸಂಘದ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ನಮ್ಮ ಕುಟುಂಬದ ಬಗ್ಗೆ ಪ್ರೀತಿ ಅಭಿಮಾನವಿಟ್ಟು ರೈತ ಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪೂಜೆ ಮಾಡಿಸಿದ್ದಾರೆ. ಇದಕ್ಕೆ ನಾವು ಯಾವಾಗಲೂ ಚಿರಋಣಿಯಾಗಿರುತ್ತೇವೆ. ದರ್ಶನ್‌ಗೆ ಅಲ್ಲಿ ಸಮಸ್ಯೆ ಇದ್ದರೂ ಕೂಡ ಇಲ್ಲಿ ಬಂದು ಕೆಲಸ ಮಾಡುತ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಅವರಿಗೆ ಶಕ್ತಿ ಬಂದಿದೆ ಎಂದು ಹೇಳಿದರು.
ಕೆಲವರು ದರ್ಶನ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಮೋಜು ಮಸ್ತಿ ಇಟ್ಟುಕೊಂಡು ಕೆಲಸ ಮಾಡುವ ಕುಟುಂಬ ನಮ್ಮದಲ್ಲ. ಬದಲಿಗೆ ಸೇವಾ ಮನೋಭಾವ ಹೊಂದಿದ್ದೇವೆ. ಶಿಲ್ಪಾ ಅವರಿಗೆ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಸಮಸ್ಯೆ ಪರಿಸ್ಥಿತಿ ಇರುವುದರಿಂದ ಅಮೆರಿಕಾಕ್ಕೆ ಹೋಗಿದ್ದಾರೆ. ಇನ್ನು ಮುಂದೆ ಆ ಸಮಸ್ಯೆ ಕಡಿಮೆಯಾಗುತ್ತದೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ. ನಾವು ಶಕ್ತಿಯುತವಾಗಿ ನಿಮ್ಮಗಳ ಜೊತೆ ಇದ್ದು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ದರ್ಶನ್, ಪತ್ನಿ ಶಿಲ್ಪಾ ಭಾವುಕ
ಮೃತ್ಯುಂಜಯ ಹೋಮದಲ್ಲಿ ಶಾಸಕ ದರ್ಶನ್ ಹಾಗೂ ಪತ್ನಿ ಶಿಲ್ಪಾ ಆನ್‌ಲೈನ್ ಮೂಲಕವೇ ಭಾಗಿಯಾದರು. ಅಮೆರಿಕಾದಲ್ಲಿರುವ ದಂಪತಿ ಪೂಜೆ ಸಮಯದಲ್ಲಿ ವಿಡಿಯೋ ಕಾಲ್ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಮುಖಂಡರು ಹಾಗೂ ಕಾರ್ಯಕರ್ತರ ಪ್ರೀತಿಗೆ ಧನ್ಯವಾದ ತಿಳಿಸಿ ಭಾವುಕರಾದರು.