ಉಡುಪಿ: ಜಿಲ್ಲೆಯಲ್ಲಿ ಶೀಘ್ರ ಮೆಟೀರಿಯಲ್ಸ್ ರಿಕವರಿ ಫೆಸಿಲಿಟಿ(ಎಂಆರ್‌ಎಫ್) ಘಟಕ ನಿರ್ಮಾಣಗೊಳ್ಳಲಿದೆ.
ರಾಜ್ಯದಲ್ಲಿಯೇ ಉಡುಪಿ ಸ್ವಚ್ಛ ಭಾರತ್ ಅಭಿಯಾನದಲ್ಲಿ ಮುಂಚೂಣಿಯಲ್ಲಿ ಇರುವುದು ಜಿಲ್ಲೆಗೆ ಘಟಕ ಮಂಜೂರಾಗಲು ಕಾರಣವಾಗಿದೆ. ಇದರ ಸಾಧಕ-ಬಾಧಕ ಅಧ್ಯಯನಕ್ಕಾಗಿ ಇತ್ತೀಚೆಗೆ ಬೆಂಗಳೂರಿನ ಜಿಗಣಿಯ ಎಂಆರ್‌ಎಫ್ ಘಟಕಕ್ಕೆ ಶಾಸಕ ಕೆ.ರಘುಪತಿ ಭಟ್ ಮತ್ತು ಸ್ಥಳೀಯ ಜನಪ್ರತಿನಿಧಿಗಳ ತಂಡ ಅಲ್ಲಿನ ಕಾರ್ಯಚಟುವಟಿಕೆಗಳ ಕುರಿತು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಘನ ತ್ಯಾಜ್ಯಗಳನ್ನು ಸಂಗ್ರಹಿಸಿ ಅವುಗಳನ್ನು ವಿಂಗಡಿಸಿ ಒಟ್ಟು ಮಾಡಿ ದೊಡ್ಡ ಕಂಪನಿಗಳಿಗೆ ಮಾರಾಟ ಮಾಡುವುದು ಈ ಯೋಜನೆ ಉದ್ದೇಶ. ಘಟಕದಿಂದ ಹೆಚ್ಚಿನ ಲಾಭ ಪಡೆಯಬಹುದು. ಹಾರಾಡಿಯ ಜತೆಗೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿಯೂ ಎಂಆರ್‌ಎಫ್ ಘಟಕ ತೆರೆಯುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಘಟಕದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂಬುವುದನ್ನು ಖಚಿತಪಡಿಸಿ ಶೀಘ್ರದಲ್ಲೇ ಹಾರಾಡಿಯಲ್ಲಿ ಕಾಮಗಾರಿ ಆರಂಭಿಸಿ ಯೋಜನೆ ಆರಂಭಿಸಲು ಮುಂದಾಗಿದ್ದಾರೆ.
2 ಕೋಟಿ ರೂ. ಮಂಜೂರು: ಸ್ವಚ್ಛತೆ ಸಂಬಂಧಿಸಿ ರಾಜ್ಯದಲ್ಲಿಯೇ ಉಡುಪಿ ಜಿಲ್ಲೆ ಮಾದರಿಯಾಗಿದ್ದು, 50ಕ್ಕೂ ಅಧಿಕ ಗ್ರಾ.ಪಂ. ಗಳಲ್ಲಿ ಘನ ದ್ರವ ಸಂಪನ್ಮೂಲ ನಿರ್ವಹಣಾ ಘಟಕ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಗ್ರಾಮೀಣ ನೀರು ಮತ್ತು ಒಳಚರಂಡಿ ಸಂಸ್ಥೆಯಿಂದ ಎಂ.ಆರ್.ಎಫ್. ಘಟಕ ನಿರ್ಮಾಣಕ್ಕಾಗಿ 2 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.
ಪರಿಸರಕ್ಕೆ ಹಾನಿ ಇಲ್ಲ: ಘಟಕ ಮಂಜೂರಾಗಿ ನಾಲ್ಕೈದು ತಿಂಗಳು ಕಳೆದರೂ ಸ್ಥಳೀಯಮಟ್ಟದಲ್ಲಿ ವಿರೋಧ ಇರುವುದರಿಂದ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಸ್ಥಳೀಯರು ತಮ್ಮೂರಿನಲ್ಲಿ ಈ ಘಟಕ ಸ್ಥಾಪಿಸುವುದು ಬೇಡವೆಂದು ಪ್ರತಿಭಟನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಬೆಂಗಳೂರಿಗೆ ತೆರಳಿ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದರು. ಅಲ್ಲಿನ ಸಾರ್ವಜನಿಕ ಅಭಿಪ್ರಾಯವನ್ನೂ ಪಡೆದುಕೊಂಡಿದ್ದರು. ಬೈಕಾಡಿ ಗ್ರಾಮದ ಸರ್ವೆ ನಂಬರ್ 83/1ರಲ್ಲಿ ಒಂದು ಎಕರೆ ಪ್ರದೇಶವನ್ನು ಇದಕ್ಕಾಗಿ ಗುರುತಿಸಲಾಗಿದೆ. ಘಟಕ ನಿರ್ಮಾಣಕ್ಕೆ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ ಸಿಕ್ಕಿದೆ. ಜಿಪಂ, ಗ್ರಾಪಂ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿ, ಸಾರ್ವಜನಿಕರನ್ನು ಸೇರಿಸಿ ಸಭೆ ಮಾಡಿದ್ದಾರೆ. ಘಟಕ ಸ್ಥಾಪನೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಪರಿಸರಕ್ಕೆ ಹಾನಿಯಿಲ್ಲ ಎನ್ನುವ ಮನವರಿಕೆ ಮಾಡಿಕೊಡುತ್ತಿದ್ದಾರೆ.
50 ಮಂದಿಗೆ ಉದ್ಯೋಗವಕಾಶ: ಘಟಕ ನಿರ್ಮಾಣವಾದ ಬಳಿಕ ಇಲ್ಲಿ 50 ಮಂದಿಗೆ ಉದ್ಯೋಗ ಅವಕಾಶ ಸಿಗಲಿದೆ. ಘಟಕದಲ್ಲಿ ಘನ ತ್ಯಾಜ್ಯ ಮಾತ್ರ ಸಂಗ್ರಹಿಸಲಾಗುತ್ತದೆ. ದ್ರವ, ಕೊಳೆಯುವ ತ್ಯಾಜ್ಯ ಸಂಗ್ರಹಿಸುವುದಿಲ್ಲ. ಘನ ತ್ಯಾಜ್ಯವನ್ನು ಪ್ಲಾಸ್ಟಿಕ್, ಪೇಪರ್ ಎಂದು ಪ್ರತ್ಯೇಕಿಸಲಾಗುತ್ತದೆ. ವಿಂಗಡಿಸಿದ ತ್ಯಾಜ್ಯ ಒಟ್ಟುಮಾಡಿ ಇನ್ನಿತರೆ ಕಾರ್ಖಾನೆಗಳಿಗೆ ಕಚ್ಚಾ ವಸ್ತು ಪೂರೈಕೆ ಮಾಡಲಾಗುತ್ತದೆ.
ಹಾರಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಘಟಕ ಪ್ರಾರಂಭಿಸಲು ಪಂಚಾಯಿತಿ ಜನಪ್ರತಿನಿಧಿಗಳು, ಸಾರ್ವಜನಿಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಘಟಕ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಿಲ್ಲ.
-ಕೆ.ರಘುಪತಿ ಭಟ್, ಶಾಸಕ, ಉಡುಪಿ
- ಅವಿನ್ ಶೆಟ್ಟಿ