ಜಿಲ್ಲೆ

ರಂಭಾಪುರಿ ಪೀಠಕ್ಕೆ ಅಭಿವೃದ್ಧಿಯ ಮೈಲುಗಲ್ಲು ತಂದ ಶ್ರೀಗಳು

ಬಾಳೆಹೊನ್ನೂರು: ರಂಭಾಪುರಿ ಪೀಠದ ಪ್ರಸ್ತುತ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣದ ನಂತರ ಶ್ರೀಪೀಠವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ದು ಶ್ರೀಪೀಠಕ್ಕೆ ಹೊಸ ಅಭಿವೃದ್ಧಿಯ ಮೈಲಿಗಲ್ಲನ್ನು ತಂದಿದ್ದಾರೆ ಎಂದು ಜಗದ್ಗುರು ರೇಣುಕಾಚಾರ್ಯ ಐಟಿಐ ಕಾಲೇಜು ಪ್ರಾಚಾರ್ಯ ಎಚ್.ಆರ್.ಆನಂದ್ ಹೇಳಿದರು.

ರೇಣುಕ ನಗರದ ಜಗದ್ಗುರು ರೇಣುಕಾಚಾರ್ಯ ಐಟಿಐ ಕಾಲೇಜಿನಲ್ಲಿ ಆಯೋಜಿಸಿದ್ದ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ 69ನೇ ಜನ್ಮ ವರ್ಧಂತಿ ಮಹೋತ್ಸವದಲ್ಲಿ ಮಾತನಾಡಿ, ರಂಭಾಪುರಿ ಜಗದ್ಗುರುಗಳು ರಂಭಾಪುರಿ ಪೀಠವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ದು ಶ್ರೀಪೀಠದ ಹೆಸರನ್ನು ಕೀರ್ತಿಯ ಶಿಖರಕ್ಕೆ ಏರಿಸಿದ್ದಾರೆ.

ಅಕ್ಷರ ದಾಸೋಹ, ಅನ್ನ ದಾಸೋಹ ನಿರಂತರವಾಗಿ ಶ್ರೀಪೀಠದಲ್ಲಿ ನಡೆಯುತ್ತಿದ್ದು, ರಂಭಾಪುರಿ ಜಗದ್ಗುರುಗಳು ತ್ರಿವಿಧ ದಾಸೋಹಿಗಳಾಗಿದ್ದಾರೆ. ಮಲೆನಾಡಿನ ಗ್ರಾಮೀಣ ಪ್ರದೇಶದ ಯುವಕರಿಗಾಗಿ ಜಗದ್ಗುರು ರೇಣುಕಾಚಾರ್ಯ ಐಟಿಐ ಸಂಸ್ಥೆಯನ್ನು ಉನ್ನತ ದರ್ಜೆಗೆ ಏರಿಸಲಾಗಿದೆ. ಯುವಕರು ನಿರುದ್ಯೋಗಿಗಳಾಗಬಾರದು ಎಂಬ ಉದ್ದೇಶದಿಂದ ಐಟಿಐ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ತರಬೇತಿ ನೀಡಿ ಉದ್ಯೋಗ ಕೊಡಿಸಲಾಗುತ್ತಿದೆ ಎಂದರು.

ಬಿ.ಕಣಬೂರು ಗ್ರಾಪಂ ಸದಸ್ಯ ಬಿ.ಜಗದೀಶ್ಚಂದ್ರ ಮಾತನಾಡಿ, ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಶ್ರೀಪೀಠದಲ್ಲಿ ಹೊಸ ಕ್ರಾಂತಿ ಮಾಡಿದ್ದು, ನಿರಂತರವಾಗಿ ರಾಜ್ಯಾದ್ಯಂತ ಸಂಚರಿಸಿ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ಭಕ್ತರ ಮನದಲ್ಲಿ ನೆಲೆಯೂರಿರುವ ಅವರು ನಡೆದಾಡುವ ರೇಣುಕರೆಂದೆ ಕರೆಯಲ್ಪಡುತ್ತಿದ್ದಾರೆ. ಪೀಠದಲ್ಲಿ ಐತಿಹಾಸಿಕ, ಚಾರಿತ್ರಿಕ ಹೊಸ ಕೆಲಸಗಳನ್ನು ಆರಂಭಿಸಿ ಭಕ್ತರಿಗೆ ಉತ್ತಮ ಸೇವೆ ಲಭಿಸುವಂತೆ ಮಾಡಿದ್ದಾರೆ. ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯರ 51ಅಡಿ ಎತ್ತರದ ಶಿಲಾಮಯ ಮೂರ್ತಿ ಸ್ಥಾಪನೆಗೆ ಅಡಿಗಲ್ಲನ್ನು ಹಾಕಿದ್ದಾರೆ ಎಂದರು.

ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎಸ್.ನಾಗರಾಜಭಟ್, ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್, ಶಿಕ್ಷಕರಾದ ಉಮೇಶ್, ಮಲ್ಲಿಕಾರ್ಜುನ, ಅಶೋಕ್, ಚಂದ್ರಶೇಖರ್, ಶ್ರೀನಿವಾಸ್, ಪ್ರಕಾಶ್, ಅಖಿಲೇಶ್ ಮತ್ತಿತರರು ಇದ್ದರು.