ಉಪನ್ಯಾಸಕ ಸಿದ್ಧರಾಮ ಖಾನಾಪುರ ಅಭಿಮತ, ಗದುಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ರಬಕವಿ/ಬನಹಟ್ಟಿ: ಗದುಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಪುಸ್ತಕ ಸಂಸ್ಕೃತಿಯ ಹರಿಕಾರರಾಗಿದ್ದರು ಎಂದು ಇಲ್ಲಿನ ಎಸ್. ಆರ್‌ಎ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಿದ್ಧರಾಮ ಖಾನಾಪುರ ತಿಳಿಸಿದರು.
ಬನಹಟ್ಟಿ ಗೆಳೆಯರ ಬಳಗದ ಆಶ್ರಯದಲ್ಲಿ ಡಾ. ಸ.ಜ. ನಾಗಲೋಟಿಮಠ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗದುಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
600ಕ್ಕೂ ಹೆಚ್ಚು ಗ್ರಂಥಗಳನ್ನು ಮುದ್ರಿಸುವ ಮೂಲಕ ವಿಶ್ವ ವಿದ್ಯಾಲಯಗಳು ಮಾಡದ ಕಾರ್ಯವನ್ನು ಸಿದ್ಧಲಿಂಗ ಸ್ವಾಮೀಜಿ ಮಾಡಿದ್ದರು. ಮಠವನ್ನು ಸಾಹಿತ್ಯ, ಸಂಗೀತ, ಕಲೆಗಳ ತವರನ್ನಾಗಿಸಿದರು. ಮಠವನ್ನು ಮಾನವೀಯ ಮೌಲ್ಯಗಳ ಕೇಂದ್ರವನ್ನಾಗಿಸಿದ್ದರಲ್ಲದೆ, ತಾವೂ ಮಾದರಿ ಸ್ವಾಮೀಜಿ ಆಗಿದ್ದರು ಎಂದರು.
ಎಸ್‌ಟಿಸಿ ಕಾಲೇಜು ಉಪನ್ಯಾಸಕ ವಿ.ವೈ. ಪಾಟೀಲ ಮಾತನಾಡಿ, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ಪರಿಸರಕ್ಕೆ ಅನ್ಯಾಯವಾದರೆ ಅವುಗಳ ವಿರುದ್ಧ ಸ್ವಾಮೀಜಿ ಹೋರಾಟ ಮಾಡಿದ್ದರು. ಗೋಕಾಕ ಚಳವಳಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಗೋಪಾಲ ಭಟ್ಟಡ, ದಾನೇಶ ಮೋಪಗಾರ, ಕಿರಣ ಆಳಗಿ, ವಿಶ್ವಜ ಕಾಡದೇವರ, ಐಶ್ವರ್ಯ ತೇಲಿ ಇದ್ದರು.