ಕೋಲಾರ: ಬಹುದಿನಗಳ ಕನಸಾಗಿದ್ದ ಕೋಲಾರ&ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಗೆ ಸರ್ಕಾರದಿಂದ ಮನ್ನಣೆ ಸಿಕ್ಕಿದ್ದು, ಪ್ರತ್ಯೇಕ ಒಕ್ಕೂಟಗಳಿಗೆ ಶ್ರೀವೇ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಲಿದೆ ಎಂದು ಕೋಲಾರ&ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಕೋಚಿಮುಲ್ ಹಾಲು ಒಕ್ಕೂಟದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಒಕ್ಕೂಟವನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಸರ್ಕಾರ ನೇಮಕ ಮಾಡುವ ಆಡಳಿತಾಧಿಕಾರಿಗಳು ಮುಂದುವರಿಸಿಕೊಂಡು ಹೋಗಲಿದ್ದಾರೆ. ಆಡಳಿತಾಧಿಕಾರಿಗಳು ಚುನಾವಣೆ ಪ್ರಕ್ರಿಯೆ ನಡೆಸಲಿದ್ದಾರೆ ಎಂದರು.
ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಹಾಗೂ ಎರಡೂ ಜಿಲ್ಲೆಯ ಶಾಸಕರ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಹಾಲು ಉತ್ಪಾದಕರ ಸಹಕಾರದಿಂದ ಕೋಚಿಮುಲ್ ವಿಭಜನೆಗೆ ಸಾಧ್ಯವಾಗಿದೆ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ತರಾತುರಿಯಲ್ಲಿ ಒಕ್ಕೂಟ ವಿಭಜನೆಗೆ ಅವೈಜ್ಞಾನಿಕ ನೀತಿ ಅನುಸರಿಸಿದ ಕಾರಣ ನ್ಯಾಯಾಲಯ ಮೆಟ್ಟಿಲೇರಬೇಕಾಯಿತು. ನಂತರ ವೈಜ್ಞಾನಿಕವಾಗಿ ವಿಭಜನೆಗೆ ಅನುಮೋದನೆ ಪಡೆದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ಜತೆಗೆ ಈಗಿನ ಸರ್ಕಾರದಿಂದಲೂ ವಿಭಜನೆಗೆ ಮನ್ನಣೆ ಸಿಕ್ಕಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ಹಾಗೂ ನನ್ನ 5 ವರ್ಷದ ಅಧ್ಯಕ್ಷ ಅವಧಿಯಲ್ಲಿ ಒಕ್ಕೂಟವನ್ನು ಪ್ರಗತಿಯಲ್ಲಿ ನಡೆಸಲಾಗುತ್ತಿದೆ. 185 ಕೋಟಿ ರೂ. ವೆಚ್ಚದಲ್ಲಿ 7.5 ಲಕ್ಷ ಲೀಟರ್ ಸಾಮರ್ಥ್ಯದ ಎಂ.ವಿ.ಕೆ ಗೋಲ್ಡನ್ ಡೇರಿ ಸ್ಥಾಪನೆ ಮಾಡಲಾಗುತ್ತಿದೆ. 2 ಕೋಟಿ. ರೂ. ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ, ಚಿಂತಾಮಣಿಯಲ್ಲಿ 55 ಕೋಟಿ ರೂ. ವೆಚ್ಚದ ಐಸ್ಕ್ರೀಂ ಉತ್ಪಾದನಾ ಘಟಕ ಹಾಗೂ ಬೆಂಗಳೂರಿನಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಸತಿ ನಿಲಯ ಪ್ರಾರಂಭ, ಚಿಕ್ಕಬಳ್ಳಾಪುರ ಮೆಗಾ ಡೇರಿಯಲ್ಲಿ 130 ಕೋಟಿ ರೂ.ಗಳ ವೆಚ್ಚದಲ್ಲಿ 7.5 ಲೀ. ಸಾಮರ್ಥ್ಯ ಸ್ಯಾಚೆಟ್ ಹಾಲು ಉತ್ಪಾದನಾ ಘಟಕ ಸ್ಥಾಪನೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ರಾಜ್ಯದ 12 ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಲಾಭ ಸೇರಿದಂತೆ ಪ್ರಗತಿಯಲ್ಲಿ ನಂ.1 ಸ್ಥಾನ ತೆಗೆದುಕೊಳ್ಳಲು ಸಾಧ್ಯವಾಯಿತು. ಹಾಗೂ ಮಂಗಳೂರು ಹಾಲು ಒಕ್ಕೂಟದ ನಂತರ ರೈತರಿಗೆ ಹಾಲಿಗೆ ಹೆಚ್ಚಿನ ಹಣ
ನೀಡುತ್ತಿರುವುದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟದಲ್ಲಿ ಮಾತ್ರ ಎಂದರು.
ಸುದ್ದಿಗೋಷ್ಠಿಯಲ್ಲಿ ಕೋಚಿಮುಲ್ ನಿರ್ದೇಶಕರಾದ ಹನುಮೇಶ್, ಡಿ.ವಿ.ಹರೀಶ್, ಕಾಂತರಾಜು, ವೇದ, ಅಶ್ವತ್ಥನಾರಾಯಣ, ಎಂ.ಡಿ.ಗೋಪಾಲಮೂರ್ತಿ ಇದ್ದರು.
ರಾಜ್ಯ ಸರ್ಕಾರದಿಂದ ಅಡೆತಡೆ ನಿವಾರಣೆ
ಸಂಸದ ಕೆ.ಸುಧಾಕರ್ ಅವರ ಒತ್ತಾಸೆಯ ಮೇರೆಗೆ ಕೋಲಾರ&ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಯಾಗಲಿದೆ. ಅವರ ಆತುರದ ತೀಮಾರ್ನದಿಂದ ನ್ಯಾಯಾಲಯದ ಮೆಟ್ಟಿಲು ಏರಬೇಕಾಯಿತು. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಭಜನೆಗೆ ಇದ್ದ ಅಡೆ ತಡೆಗಳನ್ನು ನಿವಾರಣೆ ಮಾಡಿ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ಒದಗಿಸಿದ ನಂತರ ವಿಭಜನೆಗೆ ಅನುಕೂಲವಾಯಿತು ಎಂದು ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.
ಒಕ್ಕೂಟ ಬೆಳೆದು ಬಂದ ದಾರಿ
ಬೆಂಗಳೂರು ಹಾಲು ಒಕ್ಕೂಟದಿಂದ 1987ರಲ್ಲಿ ವಿಭಜನೆಗೊಂಡು ಕೋಲಾರ&ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆಯಾದ ನಂತರ 2008ರಲ್ಲಿ ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲಾ ಒಕ್ಕೂಟ ಎಂದು ನಾಮಕರಿಸಲಾಯಿತು. ಕೇವಲ 460 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ 1.57 ಲಕ್ಷ ಲೀ. ಹಾಲು ಶೇಖರಣೆಗೊಂಡು ಪ್ರಾರಂಭಗೊಂಡ ಒಕ್ಕೂಟ ಸೆ.2024ರ ವೇಳೆಗೆ 1937 ಸಂಘಗಳ 11.67 ಲಕ್ಷ ಕೆ.ಜಿ ಹಾಲು ಶೇಖರಣೆ ಮಾಡುತ್ತಿದ್ದು, ಜಿಲ್ಲೆಯಲ್ಲಿ 236 ಮಹಿಳಾ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಆರಂಭದಲ್ಲಿ 8.56 ಕೋಟಿ ರೂ. ಇದ್ದ ಷೇರು ಬಂಡವಾಳ 2023&-24ರ ಅಂತ್ಯಕ್ಕೆ <76.08 ಕೋಟಿ ಆಗಿತ್ತು. ಈಗ ವಿಭಜನೆಗೊಂಡಿರುವುದರಿಂದ ಷೇರು ಬಂಡವಾಳದಲ್ಲಿ ಶೇ.55 ಕೋಲಾರ ಮತ್ತು ಶೇ.45 ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಆಗಬೇಕಾಗುತ್ತದೆ ಎಂದು ಶಾಸಕರು ತಿಳಿಸಿದರು.
ಕೋಚಿಮುಲ್ ಒಕ್ಕೂಟದ ಅಧ್ಯಕ್ಷರಾಗಿರುವ ಕೆ.ವೈ.ನಂಜೇಗೌಡ ಶಾಸಕರು ಆಗಿರುವುದರಿಂದ ಕೋಲಾರ&ಚಿಕ್ಕಬಳ್ಳಾಪುರ ಒಕ್ಕೂಟವನ್ನು ಅಭಿವೃದಧ್ದಿಪಡಿಸಲು ಸಾಧ್ಯವಾಯಿತು. ಸರ್ಕಾರದಿಂದ ಪ್ರಭಾವಗೊಳಿಸಿ ಅನುದಾನ ಹಾಗೂ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಯಿತು. -ಕಾಡೇನಹಳ್ಳಿ ನಾಗರಾಜ್ ನಿರ್ದೇಶಕ ನನ್ನ ಅವಧಿಯಲ್ಲಿ ಅಭಿವೃದ್ಧಿಗೆ ಮನ್ನಣೆ ಸಿಕ್ಕಿತ್ತು. ಆದರಿಂದ ಖುಷಿಯೂ ಆಗಿದೆ. ನೇಮಕಾತಿ ಸಂದರ್ಭದಲ್ಲಿ ಇ.ಡಿ.ದಾಳಿಯಿಂದ ನೋವು ಉಂಟಾಗಿದೆ. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. -ಕೆ.ವೈ.ನಂಜೇಗೌಡ ಶಾಸಕ