ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 500 ಎಕರೆ ಭೂ ಸ್ವಾಧೀನದ ಕೆಐಎಡಿಬಿ ನಿರ್ಧಾರವನ್ನು ಹಿಂಪಡೆಯಲು ಸಂಸದ ಡಾ.ಕೆ.ಸುಧಾಕರ್ ಮನವಿ ಸಲ್ಲಿಸಿದ್ದಾರೆ.
ನೆಲಮಂಗಲ ತಾಲೂಕು, ಸೋಂಪುರ ಹೋಬಳಿ, ಹನುಮಂತಪುರ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಕೋಡಿಪಾಳ್ಯ ಮತ್ತು ಬಿದಲೂರು ಗ್ರಾಮದ 500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆ.ಐ.ಎ.ಡಿ.ಬಿ. ರೈತರಿಗೆ ನೋಟಿಸ್ ನೀಡಿತ್ತು. ಇವು ಸಂಪೂರ್ಣ ಕೃಷಿ ಜಮೀನುಗಳಾಗಿದ್ದು, ಇಲ್ಲಿ ತೆಂಗು, ಅಡಿಕೆ, ಬಾಳೆ ಸೇರಿದಂತೆ ತೋಟಗಾರಿಕಾ ಇತರ ಬೆಳೆಗಳನ್ನು ಬೆಳೆಯಲಾಗಿದೆ. ಆದರೂ ಇದನ್ನು ಪರಿಶೀಲಿಸದೇ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು ಇದಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದೆ. ಇದರ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಸಚಿವ ಎಂ.ಬಿ.ಪಾಟೀಲ್ಗೆ ಸಂಸದ ಸುಧಾಕರ್ ಪತ್ರ ಬರೆದು ಗಮನ ಸೆಳೆದಿದ್ದು ಕೂಡಲೇ ಮಧ್ಯಪ್ರವೇಶಿಸಿ ಸ್ವಾಧೀನ ತಡೆಹಿಡಿದು, ಪರ್ಯಾಯ ಮಾಗೋರ್ಪಾಯಗಳ ಬಗ್ಗೆ ಚರ್ಚಿಸಬೇಕು ಮತ್ತು ರೈತರ ಬದುಕಿನ ಹಿತದೃಷ್ಟಿಯಿಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 500 ಎಕರೆ ಕೃಷಿ ಭೂಮಿ ಸ್ವಾಧೀನದ ಪ್ರಕ್ರಿಯೆ ಮರುಪರಿಶೀಲಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
*ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರ ಕೃಷಿ ಭೂಮಿ ಸ್ವಾಧೀನದ ಪ್ರಸ್ತಾವ ಕೈ ಬಿಡುವಂತೆ ಮನವಿ ಮಾಡಿದ ಪತ್ರಕ್ಕೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಪ್ರಸ್ತಾವವನ್ನು ಮರುಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ.
ಡಾ.ಕೆ.ಸುಧಾಕರ್, ಸಂಸದ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ