ಜಿಲ್ಲೆ

ಸಂಸದರ ಹೇಳಿಕೆ ಹಾಸ್ಯಾಸ್ಪದ: ಉಸ್ಮಾನ್

ಆದರ್ಶ್. ಎಂ.ಕೆ.

ಮಡಿಕೇರಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಸರ್ವರಿಗೂ ಸಮಾನ ಹಕ್ಕುಗಳನ್ನು ಸಂವಿಧಾನ ನೀಡಿದೆ. ಇದರ ಆಧಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯಡಿವರು ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಇದು ಹಕ್ಕುಗಳ ಪ್ರತಿಪಾದನೆಯೇ ಹೊರತು ಅಲ್ಪಸಂಖ್ಯಾತರ ಓಲೈಕೆಯಲ್ಲ ಎಂದು ತಿಳಿಸಿದ್ದಾರೆ.


ಪ್ರತಿ ಚುನಾವಣೆ ಸಂದರ್ಭ ಬಹುಸಂಖ್ಯಾತ, ಅಲ್ಪಸಂಖ್ಯಾತ ಎಂದು ಬೇಧಭಾವದ ಮಾತುಗಳನ್ನಾಡಿ ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಕಂಡು ಹತಾಶೆಗೊಂಡಿರುವ ಸಂಸದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿ ಮಾಡಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಪರಿಶಿಷ್ಟರ ಅನುದಾನ ಬೇರೆಡೆಗೆ ಹೋಗಿದೆ ಎಂದು ಚುನಾವಣೆ ಸಂದರ್ಭದಲ್ಲಿ ಪರಿಶಿಷ್ಟರ ಬಗ್ಗೆ ಭಾರೀ ಕಾಳಜಿ ತೋರುತ್ತಿರುವ ಸಂಸದರು, ಕಳೆದ ೧೦ ವರ್ಷಗಳಲ್ಲಿ ಕೊಡಗು ಜಿಲ್ಲೆಯ ಎಷ್ಟು ಗಿರಿಜನ ಹಾಡಿಗಳಿಗೆ ಭೇಟಿ ನೀಡಿದ್ದಾರೆ. ಆದಿವಾಸಿಗಳ ಸಮಸ್ಯೆಗಳಿಗೆ ಎಷ್ಟು ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಎಷ್ಟು ಹಾಡಿಗಳಿಗೆ ತಲುಪಿಸಿದ್ದಾರೆ ಎನ್ನುವುದನ್ನು ಮೊದಲು ಬಹಿರಂಗ ಪಡಿಸಲಿ ಎಂದು ಉಸ್ಮಾನ್ ಒತ್ತಾಯಿಸಿದ್ದಾರೆ.