ಜಿಲ್ಲೆ

ಕನ್ನಡಿಗರನ್ನು ರಾಯಭಾರಿ ಮಾಡಲು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯ

ಮೈಸೂರು: ಕನ್ನಡಿಗರೇ ಕಟ್ಟಿ ಬೆಳೆಸಿದ ಮೈಸೂರು ಸ್ಯಾಂಡಲ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದ ಕನ್ನಡಿಗರನ್ನು ರಾಯಭಾರಿ ಮಾಡಬೇಕು. ಹಾಗಾಗಿ, ನಟಿ ತಮನ್ನಾ ಭಾಟಿಯಾ ನೇಮಕಕ್ಕೆ ನಮ್ಮ ವಿರೋಧ ಇದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಸಾಬೂನು ಎಂದ ಕೂಡಲೇ ಹೀರೋಯಿನ್ನೇ ಯಾಕೆ ಬೇಕು ಎನ್ನುವ ಭಾವನೆ ಇದೆ. ಸೂಪ್‌ಗೆ ಲಿಂಗಬೇಧ ಇಲ್ಲ. ಕ್ರಿಕೆಟ್ ಆಟಗಾರರು, ಒಳ್ಳೆಯ ನಾಯಕ ನಟರು ರಾಯಭಾರಿ ಆಗಬಹುದಿತ್ತು. ಸರ್ಕಾರದ ಈ ನಡೆ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ನಗರದಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಬೇಸರ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕನ್ನಡಿಗರು ಬಹಳಷ್ಟು ಜನ ಇದ್ದಾರೆ. ಅವರ‌್ಯಾರು ಸರ್ಕಾರದ ಕಣ್ಣಿಗೆ ಕಾಣಿಸಲಿಲ್ಲವೇ? ಅವರದ್ದೇ ಪಕ್ಷದ ನಟಿ ರಮ್ಯಾ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡಿಗರನ್ನೇ ರಾಯಭಾರಿ ಮಾಡಿದ್ದರೆ ಬ್ರಾೃಂಡ್ ಮೌಲ್ಯ ಇನ್ನು ಹೆಚ್ಚಾಗುತ್ತಿತ್ತು ಎಂದರು.

ಸಾಮಾಜಿಕ ಜಾಲತಾಣದಲ್ಲಿ ಯದುವೀರ್ ಅವರೇ ರಾಯಭಾರಿ ಆಗಬೇಕು ಎನ್ನುವ ಅಭಿಯಾನಕ್ಕೆ ಪ್ರತಿಕ್ರಿಯಿಸಿ, ನನಗೆ ವೈಯಕ್ತಿಕವಾಗಿ ರಾಯಭಾರಿಯಾಗುವ ಆಸೆ ಇಲ್ಲ. ರಾಜಮನೆತನ ಕಮರ್ಷಿಯಲ್ ಆಗಿ ಸೇವೆ ಮಾಡುವುದಿಲ್ಲ. ನಾವು ಸದಾಕಾಲ ಕನ್ನಡದ ಬ್ರಾಂಡ್‌ಗಳ ಪರವಾಗಿಯೇ ಇರುತ್ತೇವೆ. ಹೀಗಾಗಿ ನನ್ನ ಹೆಸರು ಸಾಮಾಜಿಕ ಜಾಲಾತಾಣದಲ್ಲಿ ಬರುತ್ತಿದ್ದರೂ ಅದಕ್ಕೆ ನನ್ನ ಸಹಮತ ಇಲ್ಲ ಎಂದು ಹೇಳಿದರು.