ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಮಂಗಳವಾರ ಮುಂಜಾನೆ ಆಗಮಿಸಿದ ಮೈಸೂರು ಕೊಡಗು ಲೋಕಸಭಾ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾಲ್ನಡಿಗೆಯಲ್ಲಿ ಎಲ್ಲರೊಂದಿಗೆ ಬೆಟ್ಟ ಹತ್ತಿದರು. 
ಜಿಲ್ಲೆ

ಶ್ರೀಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟ ಹತ್ತಿದ ಸಂಸದ

ನಾಗೇಶ ಎಸ್

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಪ್ರಸಿದ್ಧ ಶ್ರೀಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ಮಂಗಳವಾರ ಮುಂಜಾನೆ ಆಗಮಿಸಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದರು.

ಸುಮಾರು 3108 ಮೆಟ್ಟಿಲು ಹೊಂದಿರುವ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ದೀವಟಿಗೆ (ಪಂಜಿನ) ಮೆರವಣಿಗೆ ಹಬ್ಬದ ಸಡಗರ ವಿಶೇಷವಾಗಿ ನಡೆಯಲಿದೆ. ಮಂಗಳವಾರ ದೀಪಾವಳಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಭಕ್ತರು ಮತ್ತು ಪಕ್ಷದ ಕಾರ್ಯಕರ್ತರ ಜತೆಗೂಡಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಟ್ಟ ಹತ್ತಿದರು. ಬೆಟ್ಟದ ಮೇಲಿನ ದೇಗುಲದಲ್ಲಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಬಳಿಕ ಬೆಟ್ಟದ ತಪ್ಪಲಿನಲ್ಲಿ ದೀಪಾವಳಿ ಹಬ್ಬದ ಅನ್ನದಾಸೋಹ ಸಮಿತಿಯಿಂದ ಆಯೋಜಿಸಿದ ಅನ್ನದಾಸೋಹಕ್ಕೆ ಚಾಲನೆ ನೀಡಿದರು.

ಯದುವೀರ್ ಮಾತನಾಡಿ, ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟವು ಪ್ರವಾಸೋದ್ಯಮ ಸ್ಥಳವಲ್ಲ, ಇದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಈಗಾಗಲೇ ಬೆಟ್ಟಕ್ಕೆ ರಾಜ್ಯ ಸರ್ಕಾರವು ಅನುದಾನ ನೀಡಿದೆ. ಆದರೂ ಭಕ್ತರಿಗೆ ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಚರ್ಚಿಸಿ ಅಭಿವೃದ್ಧಿ ಮಾಡಬೇಕಿದೆ. ನಮ್ಮ ಪೂರ್ವಜರಾದ ಜಯಚಾಮರಾಜ ಒಡೆಯರ್ ಇಲ್ಲಿಗೆ ಭೇಟಿ ನೀಡಿದ್ದು, ಇಲ್ಲಿ ಸಿಕ್ಕಿದಂತಹ ಎರಡು ಆನೆಗಳಲ್ಲಿ ಜಯಮಾತಾರ್ಂಡ ಆನೆಯು ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಧಾರ್ಮಿಕ ಹಾಗೂ ಪ್ರಾಚೀನ ಕಾಲದ ಸ್ಥಳಗಳು ಉಳಿಯಬೇಕು. ಮುಂದಿನ ಪೀಳಿಗೆಗೆ ಇಲ್ಲಿನ ಇತಿಹಾಸವನ್ನು ಹೇಳುವಂತಹ ಕೆಲಸವಾಗಬೇಕಿದೆ ಎಂದರು.

ಬೆಟ್ಟದಪುರ ಸಮೀಪದ ಸೀತೆ ಬೆಟ್ಟ ಸೇರಿದಂತೆ ಈ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಪ್ರಾಚೀನ ಸ್ಥಳಗಳು ಹಾಳಾಗುತ್ತಿವೆ. ಅಕ್ರಮ ಗಣಿಗಾರಿಕೆಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಸಂಸದರಿಗೆ ಸ್ಥಳೀಯ ಬಿಜೆಪಿ ಕಾರ್ಯದರ್ಶಿ ಸುನೀಲ್ ಕುಮಾರ್ ಸೇರಿದಂತೆ ಸ್ಥಳೀಯರು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಅಕ್ರಮ ಗಣಿಗಾರಿಕೆಗೆ ನಮ್ಮ ವಿರೋಧವಿದೆ. ಪ್ರಾಚೀನ ಕಾಲದ ಬೆಟ್ಟದ ಜಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುವುದರಿಂದ ಸ್ಥಳದ ಮಹತ್ವ ಹಾಳಾಗುತ್ತಿದೆ. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ತಾಲೂಕು ಆಡಳಿತ ಕ್ರಮವಹಿಸಬೇಕಿದೆ. ಪರಿಸರ ಸೂಕ್ಷ್ಮ ವಲಯವನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸುವ ಭರವಸೆ ನೀಡಿದರು.

ಮೊದಲ ಬಾರಿಗೆ ರಾಜವಂಶಸ್ಥ, ಸಂಸದ ಯದುವೀರ್ ಅವರು ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಭಕ್ತರು, ಕಾರ್ಯಕರ್ತರು ಸೇರಿದಂತೆ ಜನರು ಜೈಕಾರದ ಘೋಷ ಮೊಳಗಿಸಿದರಲ್ಲದೇ, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಬೆಟ್ಟದ ತಳಭಾಗದಿಂದ ಹಿಡಿದು ಮೆಲ್ಭಾಗದ ದೇಗುಲದವರೆಗೂ ಫೋಟೋ ಕ್ಲಿಕಿಸಿಕೊಂಡು ಸಂಭ್ರಮಿಸಿದರು.

ಪಿರಿಯಾಪಟ್ಟಣ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ, ಕಾರ್ಯದರ್ಶಿ ಸುನೀಲ್ ಕುಮಾರ್ ಎನ್., ದೀಪಾವಳಿ ಹಬ್ಬದ ಅನ್ನ ದಾಸೋಹ ಸಮಿತಿ ಅಧ್ಯಕ್ಷ ಟಿ.ಸಿ ಶಿವುದೇವ್, ಕೂರಗಲ್ಲು ಶಿವಕುಮಾರಸ್ವಾಮಿ, ಮುಖಂಡರಾದ ಎಂ.ಎಂ ರಾಜೇಗೌಡ, ಮಾಗಳಿಸ್ವಾಮಿ, ಕಿರಣ್ ಜಯರಾಮೇಗೌಡ, ಲೋಕಪಾಲಯ್ಯ, ರಮೇಶ್, ಪಿ.ಜೆ ರವಿ, ಕಣಗಾಲ್ ಮಧು, ಶಶಿ, ಆದಿತ್ಯ ಪ್ರವೀಣ್, ಮೈಲಾರಿ, ಕುಟ್ಟಿ, ನಮೋ ಮಲ್ಲೇಶ್, ಅರುಣ್ ರಾಜೇ ಅರಸ್, ರಮೇಶ್, ಚಂದ್ರು, ಸೇರಿದಂತೆ ಪಕ್ಷದ ಮತ್ತು ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಭಕ್ತರು ಇದ್ದರು.