ಮೈಸೂರು: ಅಂಚೆ ಇಲಾಖೆಯಿಂದ ಏರ್ಪಡಿಸಿದ್ದ ‘ಇಂಡಿಯಾ ಪೋಸ್ಟ್ ಮೈಸೂರು ಮ್ಯಾರಥಾನ್’ ಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರದ ನಜರ್‌ಬಾದ್‌ನಲ್ಲಿರುವ ಅಂಚೆ ತರಬೇತಿ ಕೇಂದ್ರದಲ್ಲಿ ಕರ್ನಾಟಕ ಅಂಚೆ ವೃತ್ತದಿಂದ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಎನ್‌ಇಬಿ ಸ್ಪೋರ್ಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ಇಂಡಿಯಾ ಪೋಸ್ಟ್ ಮೈಸೂರು ಮ್ಯಾರಥಾನ್ ನಡೆಸಲಾಯಿತು.
ಸಂಸದ ಯದುವೀರ್ ಮ್ಯಾರಥಾನ್‌ನ 10 ಕಿ.ಮೀ. ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 5 ಕಿ.ಮೀ, 10 ಕಿ.ಮೀ, 21ಕಿ.ಮೀ ಮತ್ತು 42ಕಿ.ಮೀ. ಈ ನಾಲ್ಕು ವಿಭಾಗದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 1000ಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು.
ಅಂಚೆ ತರಬೇತಿ ಕೇಂದ್ರದಿಂದ ಹೊರಟು ಮ್ಯಾರಥಾನ್ ದೇವೇಗೌಡ ವೃತ್ತ, ಮಣಿಪಾಲ್ ಆಸ್ಪತ್ರೆ ವೃತ್ತದಿಂದ ಮರಳಿ ಅಂಚೆ ತರಬೇತಿ ಕೇಂದ್ರ ಅಲ್ಲಿಂದ ಆರ್ಕಿಡ್ ಹೋಟೆಲ್ ರಸ್ತೆ ಮಾರ್ಗವಾಗಿ, ನಂದಿ, ತಾವರೆ ಕಟ್ಟೆ, ಉತ್ತನಹಳ್ಳಿ ಮಾರ್ಗವಾಗಿ ಸಾಗಿ ಅಂಚೆ ತರಬೇತಿ ಕೇಂದ್ರದಲ್ಲಿ ಸಂಪನ್ನಗೊಂಡಿತು.
ಕರ್ನಾಟಕ ವೃತ್ತ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್, ದಕ್ಷಿಣ ವಲಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಂದ್ರಶೇಖರ್ ಕಾಕೂಮಾನು, ಮೈಸೂರು ಅಂಚೆ ತಂತ್ರಜ್ಞಾನ ಉತ್ಕೃಷ್ಠತಾ ಕೇಂದ್ರ ಡಾ.ಸರವಣ್ಣನ್, ಅಂಚೆ ಇಲಾಖೆ ನಿರ್ದೇಶಕ ಸಂದೇಶ್ ಮಹಾದೇವಪ್ಪ ಇತರರು ಇದ್ದರು.
ಮ್ಯಾರಥಾನ್ ವಿಜೇತರು:
42 ಕಿ.ಮೀ ಮಹಿಳೆಯರ ವಿಭಾಗದಲ್ಲಿ ಬಿಜೋಯ ಬರ್ಮನ್(ಪ್ರ), ಎಚ್.ಕೆ ಅನುರಾಧಾ(ದ್ವಿ), ಎನ್.ಕೆ ಹರ್ಷಿತಾ(ತೃ) ಬಹುಮಾನ ಪಡೆದರು. ಪುರುಷರ ವಿಭಾಗದಲ್ಲಿ ಸಿ.ಎಸ್. ಲಕ್ಷ್ಮೀಶಾ(ಪ್ರ), ಅಕ್ಷಯ್ ಶ್ರೀಧರ್(ದ್ವಿ), ಎಸ್.ಸಾತ್ವಿಕ್(ತೃ) ತಮ್ಮದಾಗಿಸಿಕೊಂಡರು.
21 ಕಿ.ಮೀ ಮಹಿಳೆಯರ ವಿಭಾಗದಲ್ಲಿ ಸುಧಾ ಕಂಡಿ(ಪ್ರ), ಮೀರಾ ಅಶೋಕ್(ದ್ವಿ), ಅರತ್ರಿಕಾ ಪೌಲ್(ತೃ) ಬಹುಮಾನ ಪಡೆದರೆ, ಪುರುಷರ ವಿಭಾಗದಲ್ಲಿ ಶೈಲೇಶ್ ಹುಶ್ವಾಹಾ(ಪ್ರ), ಎಸ್.ಎನ್ ಶ್ರೀಧರ್(ದ್ವಿ), ವೈ.ಎಸ್. ದೀಕ್ಷಿತ್ (ತೃ) ಗೆಲುವಿನ ನಗೆ ಬೀರಿದರು.
10 ಕಿ.ಲೋ ಮಹಿಳೆಯರ ವಿಭಾಗದಲ್ಲಿ ಎಂ.ವೀಣಾ(ಪ್ರ), ಆರ್.ರಚನಾ(ದ್ವಿ), ಎನ್.ಆರ್. ಶೋಭಾ (ತೃ) ಗಳಿಸಿದರೆ, ಪುರುಷರ ವಿಭಾಗದಲ್ಲಿ ಗಣಪತಿ(ಪ್ರ), ಎಸ್.ಸುಮಂತ್(ದ್ವಿ), ಮನಶ್ ಬರ್ಮನ್(ತೃ) ಸ್ಥಾನ ಗಳಿಸಿದರು.