ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವಿಭಜನೆ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸಿ, ಚುನಾವಣೆ ನಡೆಸಲು ಸಂಸದ ಡಾ ಕೆ.ಸುಧಾಕರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಚಿಮುಲ್ ವಿಭಜಿಸಿ, ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದು ಕೋಲಾರ ಮತ್ತು ಚಿಕ್ಕಳ್ಳಾಪುರ ಜಿಲ್ಲೆಯ ರೈತರ ಹೋರಾಟಕ್ಕೆ ಸಂದ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ವಿಭಜನೆಯ ಆದೇಶವನ್ನು ರದ್ದುಗೊಳಿಸಿ, ಜಿಲ್ಲೆಯ ರೈತರಿಗೆ ಅನ್ಯಾಯವೆಸಗಿತ್ತು. ಇದರ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ್ದು ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಈಗ ತೀರ್ಪಿನಲ್ಲಿ ವಿಭಜನೆಯ ಆದೇಶವನ್ನು ಎತ್ತಿ ಹಿಡಿದಿದೆ ಎಂದು ತಿಳಿಸಿದ್ದಾರೆ.
'ಬೆಟ್ಟ ಅಗೆದು ಇಲಿ ಹಿಡಿದರು' ಎಂಬಂತೆ ರಾಜಕೀಯ ಸ್ವಾರ್ಥಕ್ಕಾಗಿ ಹಾಗೂ ದ್ವೇಷ ರಾಜಕಾರಣಕ್ಕಾಗಿ 17 ತಿಂಗಳ ಹಿಂದೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯ ಆದೇಶವನ್ನು ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದ ದ್ವಂದ್ವ ಮತ್ತು ಎಡಬಿಡಂಗಿ ನಡೆಯಿಂದ ಸಮಯ ವ್ಯರ್ಥವಾಗಿದೆ. ಕೆಲವೇ ಕೆಲವು ನಾಯಕರ ಸ್ವಾರ್ಥ ರಾಜಕಾರಣಕ್ಕೆ ತೊಂದರೆ ಅನುಭವಿಸಬೇಕಾಯಿತು . ರೈತರಿಗಾದ ಈ ನಷ್ಟಕ್ಕೆ ಯಾರು ಹೊಣೆ? ಎಂದು ಸಂಸದರು ಪ್ರಶ್ನಿಸಿದ್ದಾರೆ.
ಇನ್ನು ಮುಂಬರುವ ದಿನಗಳಲ್ಲಾದರೂ ಜಿಲ್ಲೆಯ ಕಾಂಗ್ರೆಸ್ ನಾಯಕರು ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಬಿಟ್ಟು ಜನಪರವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದಾರೆ. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಉದ್ದುದ್ದ ಭಾಷಣ, ನೀತಿ ಪಾಠ ಹೇಳುವ ಕಾಂಗ್ರೆಸ್ ನಾಯಕರು ಕೋಚಿಮುಲ್ ಆಡಳಿತ ಮಂಡಳಿಯ ಅವಧಿಯು *2024 ರ ಮೇ 12 ಕ್ಕೆ* ಮುಕ್ತಾಯವಾಗಿದ್ದರೂ ಇನ್ನೂ ಚುನಾವಣೆ ನಡೆಸಿಲ್ಲ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಹೂಡಲಾಗಿದ್ದ ದಾವೆಗೆ ಕೋರ್ಟ್ ತೀರ್ಪು ನೀಡಿದ್ದು, ಆಡಳಿತ ಮಂಡಳಿ ರಚನೆಗಾಗಿ 90 ದಿನಗಳ ಒಳಗಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳಿಸಬೇಕೆಂದು ಜುಲೈ 17 ರಂದು ಆದೇಶಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಅಕ್ರಮ ನೇಮಕಾತಿ, ಭ್ರಷ್ಟಾಚಾರದ ಮೂಲಕ ರೈತರ ಹಣ ಲೂಟಿ ಹೊಡೆಯಲು ಚುನಾವಣೆ ನಡೆಸದೇ ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.