ನೈರುತ್ಯ ರೈಲ್ವೆ ವಿಭಾಗ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕಿಶೋರ್‌ಗೆ ಸಂಸದ ಸಂಗಣ್ಣ ಕರಡಿ ಮಂಗಳವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ಗಂಗಾವತಿ-ಅಯೋಧ್ಯೆ ರೈಲು ಆರಂಭಕ್ಕೆ ಮನವಿ

ಕೊಪ್ಪಳ: ಅಂಜನಾದ್ರಿ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಗಂಗಾವತಿ-ಅಯೋಧ್ಯೆಗೆ ರೈಲು ಸಂಚಾರ ಆರಂಭ; ಜಿಲ್ಲೆಯ ರೈಲ್ವೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ನೈರುತ್ಯ ರೈಲ್ವೆ ವಿಭಾಗ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕಿಶೋರ್‌ಗೆ ಸಂಸದ ಸಂಗಣ್ಣ ಕರಡಿ ಮಂಗಳವಾರ ಮನವಿ ಸಲ್ಲಿಸಿದರು.

ಸ್ವಾತಂತ್ರ್ಯ ಹೋರಾಟ ವೇಳೆ ಭಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧೀಜಿ ಆಗಮಿಸಿದ್ದರು. ಈ ನಿಲ್ದಾಣ ಅಭಿವೃದ್ಧಿ ಪಡಿಸಬೇಕು.

ಕಲ್ಯಾಣ ಕರ್ನಾಟಕ ಕ್ಕೆ 371(ಜೆ) ಸಿಕ್ಕಿದ್ದು, ಬೀದರ್‌ನಿಂದ ಹುಬ್ಬಳ್ಳಿ ವರೆಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು. ಗಿಣಗೇರಾ ರೈಲು ನಿಲ್ದಾಣದಲ್ಲಿ ನಾಲ್ಕನೇ ಫ್ಲಾಟ್ ಫಾರಂ ನಿರ್ಮಿಸಬೇಕೆಂದು ಮನವಿ ಮಾಡಿದರು.

ಗಂಗಾವತಿ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಮತ್ತು ಲಿಫ್ಟ್ ಅಳವಡಿಸಬೇಕು. ನಿಲ್ದಾಣದಲ್ಲಿ ಸಿಬ್ಬಂದಿ ನೇಮಕ, ಟಿಕೆಟ್ ಕೌಂಟರ್ ಹೆಚ್ಚಳ ಹಾಗೂ ರಿಸರ್ವೇಶನ್ ಟಿಕೆಟ್ ಬುಕ್ಕಿಂಗ್ ಕೌಂಟರ್ ಆರಂಭಿಸಿ.

ಕಾರಟಗಿ-ಯಶವಂತಪುರ ರೈಲು ಸಂಚಾರ ಸಮಯ ಬದಲಾವಣೆ ಹಾಗೂ ಸೊಲ್ಲಾಪುರ- ಹೊಸಪೇಟೆ ರೈಲು ಗಂಗಾವತಿ ಮಾರ್ಗವಾಗಿ ಸಂಚಾರ ಆರಂಭಿಸಲು ಒತ್ತಾಯಿಸಿದರು. ಜತೆಗೆ ಜಿಲ್ಲೆಯ ರೈಲ್ವೆ ಯೋಜನೆಗಳ ಕುರಿತು ಚರ್ಚಿಸಿ ಮಾಹಿತಿ ಪಡೆದರು.