ಸಿಂಧನೂರು: ಮುನಿರಾಬಾದ್-ಮಹಿಬೂಬ ನಗರ ರೈಲ್ವೆ ಯೋಜನೆ ಆಗಸ್ಟ್ ನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಮಳೆ, ಸರ್ವಿಸ್ ರಸ್ತೆ, ಎಲೆಕ್ಟ್ರಿಕಲ್ ಸೇರಿ ಇತರ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿದೆ. ನವೆಂಬರ್ ಮಾಸಂತ್ಯದೊಳಗೆ ಸಿಂಧನೂರಿಗೆ ರೈಲು ಸಂಚರಿಸಲಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಭರವಸೆ ನೀಡಿದರು.
ನಗರದ ಹೊರವಲಯದ ನೂತನ ರೈಲ್ವೆ ನಿಲ್ದಾಣ ಹಾಗೂ ಸರ್ವಿಸ್ ರಸ್ತೆ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಮಾತನಾಡಿದರು. ಈಗಾಗಲೇ ಯೋಜನೆಯ ಸಂಬಂಧಿಸಿದಂತೆ ಹಲವು ಬಾರಿ ಮೇಲಧಿಕಾರಿ ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದು ತ್ವರಿತಗತಿಯಲ್ಲಿ ಮುಗಿಸಲು ಸೂಚಿಸಲಾಗಿದೆ. ಇನ್ನೂ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು.
ಮುನಿರಾಬಾದ್-ಮಹಿಬೂಬನಗರದವರೆಗೂ 166 ಕಿ.ಮೀ. ವ್ಯಾಪ್ತಿಯ ರೈಲ್ವೆ ಯೋಜನೆಗೆ 2559.67 ಕೋಟಿ ರೂ. ಅಂದಾಜು ಮೊತ್ತ ಕಾಮಗಾರಿಗೆ ಮೀಸಲಿಡಲಾಗಿದೆ. ಕೊಪ್ಪಳ 1107 ಎಕರೆ, ರಾಯಚೂರು 426 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಈಗಾಗಲೇ ಮುನಿರಾಬಾದ್‌ನಿಂದ ಗೊರೇಬಾಳ ವರೆಗೆ 77 ಕಿಮೀವರೆಗೆ ರೈಲ್ವೆ ಹಳಿ ಹಾಕಲಾಗಿದೆ. ಕಾರಟಗಿವರೆಗೆ ರೈಲು ಸಂಚಾರ ಆರಂಭವಾಗಿದೆ. ಇಲ್ಲಿಯವರೆಗೂ 2022-23 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 300 ಕೋಟಿ, ರಾಜ್ಯ ಸರ್ಕಾರದಿಂದ 150 ಕೋಟಿ ರೂ. ಸೇರಿ 1997-98 ರಿಂದ ಒಟ್ಟು 1433 ಕೋಟಿ ರೂ. ಅನುದಾನ ಬಳಕೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರುಪಾಪುರ, ಬಿಜೆಪಿ ನಗರ ಅಧ್ಯಕ್ಷ ನಿರುಪಾದೆಪ್ಪ ಜೋಳದರಾಶಿ, ಪ್ರಮುಖರಾದ ವೆಂಕನಗೌಡ ಮಲ್ಕಾಪುರ, ದೇವೇಂದ್ರಪ್ಪ ಯಾಪಲಪರ್ವಿ, ಮಲ್ಲಿಕಾರ್ಜುನ ಜೀನೂರು, ರಾಮಮೂರ್ತಿ ನಾಯಕ, ರಾಮನಗೌಡ ವಕೀಲ, ಅಶೋಕಗೌಡ ಗದ್ರಟಗಿ ಇದ್ದರು.