ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿ ನಡೆಸಿದರು. ಅರುಣ ಶಹಾಪುರ, ಗುರುಲಿಂಗಪ್ಪ ಅಂಗಡಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.  
ಜಿಲ್ಲೆ

ಯುದ್ದದ ವಿಚಾರದಲ್ಲಿ ವಿವೇಚನೆಯಿಂದ ಮಾತನಾಡಿ, ಕಾಂಗ್ರೆಸ್ಸಿಗರಿಗೆ ಚಾಟಿ ಬೀಸಿದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ಯುದ್ದ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಹಾದಿ-ಬೀದಿಯಲ್ಲಿ ಇಲ್ಲ ಸಲ್ಲದ ಮಾತುಗಳನ್ನಾಡುತ್ತಿರುವುದು ದೇಶಕ್ಕೆ ಮಾಡುವ ಅಪಮಾನ ಮತ್ತು ಸೈನಿಕರ ಆತ್ಮಸ್ಥೈರ್ಯ ಕುಂದಿಸುವ ಹೇಯ ಕೃತ್ಯವೆಂದು ಸಂಸದ ರಮೇಶ ಜಿಗಜಿಣಗಿ ಕಿಡಿಕಾರಿದರು.

ಪಹಲ್ಗಾಮ್‌ನಲ್ಲಿ ಉಗ್ರರು 26 ಜನರನ್ನು ಬಲಿತೆಗೆದುಕೊಂಡು ಮಹಿಳೆಯರ ಸಿಂಧೂರ ಅಳಿಸಿದ್ದಕ್ಕೆ ಪ್ರತಿಯಾಗಿ ಆಪರೇಷನ್ ಸಿಂದೂರ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯುದ್ದ ಘೋಷಿಸಿದರು. ಪರಿಣಾಮ ಪಾಕಿಸ್ತಾನ ನರಳಿ ಬೆಂಡಾಗಿದೆ. ಇಂಥ ಸಂದರ್ಭದಲ್ಲಿ ಯುದ್ದ ವಿರಾಮಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿರುವುದು ಸರಿಯಲ್ಲ. ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕಾದವರೇ ಇಂದು ಹಾದಿ ಬೀದಿಯಲ್ಲಿ ಟೀಕಿಸುತ್ತಿರುವುದು ದೇಶದ್ರೋಹಕ್ಕೆ ಸಮ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಕಿಡಿಕಾರಿದರು.

ಸಚಿವರಾದ ಕೃಷ್ಣ ಬೈರೇಗೌಡ, ರಾಮಲಿಂಗಾ ರೆಡ್ಡಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಯುದ್ದದ ಗುರಿ ಮತ್ತು ಉದ್ದೇಶದ ಕುರಿತು ಮಾತನಾಡುತ್ತಿದ್ದಾರೆ. ಇವರು ಏನಾದರೂ ಪ್ರಶ್ನಿಸುವುದಿದ್ದರೆ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರನ್ನು ಪ್ರಶ್ನಿಸಲಿ. ಈಗಾಗಲೇ ಸರ್ವಪಕ್ಷ ಸಭೆ ಕರೆಯಲಾಗಿದೆ. ಶೀಘ್ರದಲ್ಲಯೇ ಪಾರ್ಲಿಮೆಂಟ್ ಸಭೆ ಕೂಡ ನಡೆಯಲಿದೆ. ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ನಮ್ಮ ರಾಷ್ಟ್ರೀಯ ನಾಯಕರು ಬದ್ಧರಾಗಿದ್ದಾರೆ ಎಂದರು.

ಮಾತೆತ್ತಿದರೆ ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ, ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸುವ ಸಿಎಂ ಸಿದ್ರಾಮಣ್ಣ ಕೇಂದ್ರ ಸರ್ಕಾರದೊಂದಿಗೆ ಯಾವ ರೀತಿ ಸಂಬಂಧವಿರಿಸಿಕೊಂಡಿದ್ದಾರೆಂಬುದನ್ನು ಮೊದಲು ಹೇಳಲಿ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜೊತೆಗೆ ಯಾವ ರೀತಿ ಸಂಬಂಧವಿರಿಸಿಕೊಳ್ಳಬೇಕೆಂದು ಸಿದ್ರಾಮಣ್ಣ ಕಲಿತುಕೊಳ್ಳಲಿ ಎಂದು ಚಾಟಿ ಬೀಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಪಾಕಿಸ್ತಾನದ ಮೇಲೆ ಯುದ್ದ ಸಾರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೇ ಸುಮ್ಮನಿರುವಾಗ ರಾಜ್ಯದ ಮಂತ್ರಿಗಳು ಬಾಯಿಗೆ ಬಂದಂತೆ ಮಾತನಾಡುವುದು ತರವಲ್ಲ ಎಂದರು.

ಪ್ರಿಯಾಂಕಾ ಖರ್ಗೆ, ರಾಮಲಿಂಗ ರೆಡ್ಡಿ, ಕೃಷ್ಣ ಬೈರೇಗೌಡರ ಹೇಳಿಕೆಗಳು ಅಕ್ಷಮ್ಯ. ಅವರ ಆಂಗಿಕ ಭಾಷೆ, ಬಳಸುವ ಪದಗಳನ್ನು ಜನ ಗಮನಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಮಂತ್ರಿಯಾಗಿ ಸಡಿಲ ನಾಲಿಗೆಯಿಂದ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಯುದ್ದದ ಸಂದರ್ಭ ಶಾಂತಿ ಬೇಕು ಎಂದು ಪೋಸ್ಟ್ ಮಾಡುತ್ತದೆ. ಈ ಪೋಸ್ಟ್ ಇರಿಸಿಕೊಂಡು ಪಾಕಿಸ್ತಾನದ ಸುದ್ದಿ ವಾಹಿನಿಗಳು ಸಹ ವರದಿ ಬಿತ್ತರಿಸುತ್ತವೆ. ಕಾಶ್ಮೀರ ಪಾಕಿಸ್ತಾನದ ಭಾಗ ಎಂಬಂತೆ ಮ್ಯಾಪ್ ಬಳಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ಇಂಥ ಅಪಸ್ವರದ ಹಿಂದಿರುವ ಉದ್ದೇಶವೇನು? ಯಾವ ಮಟ್ಟಕ್ಕೆ ಹತಾಶೆ ಭಾವ ತಲುಪಿದ್ದೀರಿ ಎಂದು ಹರಿಹಾಯ್ದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ಈರಣ್ಣ ರಾವೂರ, ಸಾಬು ಮಾಶ್ಯಾಳ, ವಿಜಯಕುಮಾರ ಜೋಷಿ ಮತ್ತಿತರಿದ್ದರು.