ವಿಜಯಪುರ ಜಿಲ್ಲಾಡಳಿತಕ್ಕೆ ಬಿಜೆಪಿಯಿಂದ ಮನವಿ ಸಲ್ಲಿಸಲಾಯಿತು. ಸಂಸದ ರಮೇಶ ಜಿಗಜಿಣಗಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಗುರುಲಿಂಗಪ್ಪ ಅಂಗಡಿ ಮತ್ತಿತರರಿದ್ದಾರೆ.  
ಜಿಲ್ಲೆ

ಧರ್ಮಸ್ಥಳ ಚಲೋ ಜಾಥಾಕ್ಕೆ ಚಾಲನೆ, ಹಿಂದುಗಳ ಭಾವನೆಗೆ ಧಕ್ಕೆ ತಂದರೆ ಹುಷಾರ್ ಎಂದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಹಿಂದುಗಳ ಭಾವನೆಗೆ ಧಕ್ಕೆ ತಂದರೆ ಹುಷಾರ್ ! ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ಭರಿತ ಎಚ್ಚರಿಕೆ ನೀಡಿದರು.

ನಗರದಲ್ಲಿ ಬಿಜೆಪಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ’ ರ‌್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹಿಂದುಗಳ ಶ್ರದ್ಧಾ ಕೇಂದ್ರಗಳಿಗೆ ಕಳಂಕ ತರುವ ಕೆಲಸ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಕೆಲವು ಸಹಿಸದ ಶಕ್ತಿಗಳು ಹಿಂದುಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿವೆ. ಹಿಂದು ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳಂಕ ತರಲು ಇಲ್ಲ ಸಲ್ಲದ ನೆಪ ಹುಡುಕುತ್ತಿವೆ. ಇನ್ಮುಂದೆ ಸಹಿಸಲು ಸಾಧ್ಯವಿಲ್ಲ. ಧರ್ಮಸ್ಥಳದಂಥ ಪುಣ್ಯ ಕ್ಷೇತ್ರದ ಉಳಿವಿಗಾಗಿ ನಾವೆಲ್ಲ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದರು.

ಧರ್ಮಸ್ಥಳ ಪವಿತ್ರ ಕ್ಷೇತ್ರ. ಹಿಂದುಗಳು ಭಕ್ತಿಭಾವದಿಂದ ನಡೆದುಕೊಳ್ಳುವ ಧರ್ಮಸ್ಥಳದ ಮೇಲೆ ಕಳಂಕ ತರುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ವನಾಶವಾಗುತ್ತದೆ. ಶಿವ ಎಲ್ಲವನ್ನೂ ನೋಡುತ್ತಿದ್ದಾನೆ, ಆತ ಮೂರನೇಯ ಕಣ್ಣು ತೆರೆದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದರು.

ಯಾರೋ ಒಬ್ಬ ಅವಿವೇಕಿ ಹೇಳಿದ ಮಾತ್ರಕ್ಕೆ ಅಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸುವುದೆಂದರೆ ಇನ್ನೇನು? ಇದು ಧರ್ಮವಿರೋಧಿ ಕಾರ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಧರ್ಮಸ್ಥಳದ ವಿಷಯವಾಗಿ ರಾಜ್ಯ ಸರ್ಕಾರ ಅಧರ್ಮದಿಂದ ನಡೆದುಕೊಳ್ಳುತ್ತಿದೆ. ಯಾರದ್ದೋ ಮಾತು ಕೇಳಿ ಈ ರೀತಿ ತನಿಖೆ ನಡೆಸುವುದು ಸರಿಯಲ್ಲ. ಈಗ ತನಿಖೆ ನಡೆದಿದೆ ಎಲ್ಲಿಯೂ ಒಂದು ಮೂಳೆಯೂ ಪತ್ತೆಯಾಗಿಲ್ಲ. ರಾಜ್ಯ ಸರ್ಕಾರ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವು ತಂದಿದೆ. ಇದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಧರ್ಮಸ್ಥಳ ಒಂದು ಪವಿತ್ರ ಅಧ್ಯಾತ್ಮಿಕ ಕ್ಷೇತ್ರ. ಅನೇಕ ಬಡವರಿಗೆ ಉದ್ಧರಿಸುವ ಪುಣ್ಯಕ್ಷೇತ್ರ. ಅನೇಕ ಮಹಿಳೆಯರು ಇಂದು ಆರ್ಥಿಕವಾಗಿ ಸಬಲರಾಗಿದ್ದಾರೆ. ಶ್ರೇಷ್ಠತೆಗೆ ಇನ್ನೊಂದು ಹೆಸರಾಗಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಪ್ರೋತ್ಸಾಹ ನೀಡಿರುವ ಸರ್ಕಾರದ ಕ್ರಮ ಖಂಡನೀಯ, ಸರ್ಕಾರದ ಈ ನಡೆಯನ್ನು ವ್ಯಾಪಕವಾಗಿ ಖಂಡಿಸಬೇಕಿದೆ, ಧರ್ಮಸ್ಥಳ ಚಲೋ ಹೋರಾಟಕ್ಕೆ ನಾವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದರು.

ಮುಖಂಡರಾದ ಉಮೇಶ ಕಾರಜೋಳ, ಸಂಜೀವ ಐಹೊಳಿ, ವಿವೇಕಾನಂದ ಡಬ್ಬಿ, ಉಮೇಶ ಕೋಳಕೂರ, ಸುರೇಶ ಬಿರಾದಾರ, ಚಂದ್ರಶೇಖರ ಕವಟಗಿ, ಸಂದೀಪ ಪಾಟೀಲ, ಭರತ ಕೋಳಿ, ಕಾಸುಗೌಡ ಬಿರಾದಾರ, ಶಿವಾನಂದ ಭೂಯ್ಯರ, ಶರಣು ಸಬರದ, ಸಿದ್ದನಗೌಡ ಪಾಟೀಲ, ಗೋಪಾಲ್ ಘಟಕಂಬಳಿ, ಭೀಮಾಶಂಕರ ಹದನೂರ, ಮಂಜುನಾಥ ಮೀಸೆ, ಸ್ವಪ್ನಾ ಕಣಮುಚನಾಳ, ಮಳುಗೌಡ ಪಾಟೀಲ, ಮಲ್ಲಿಕಾರ್ಜುನ ದೇವರಮನಿ, ವಿಜಯ ಜೋಶಿ, ಸಿದ್ದು ಮಲ್ಲಿಕಾರ್ಜುನಮಠ, ಸಂಗಮೇಶ ಹೌದೆ, ಈರಣ್ಣ ಪಟ್ಟಣಶೆಟ್ಟಿ, ಚನ್ನು ಚನಗೊಂಡ, ಅನೀಲ ಉಪ್ಪಾರ, ವಿಜಯ ಹಿರೇಮಠ ಮತ್ತಿತರರಿದ್ದರು.

ನಗರದ ಮಹಾತ್ಮ ಗಾಂಧಿವೃತ್ತದಿಂದ ಆರಂಭಗೊಂಡ ರ‌್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನಾ ಸಭೆಯಾಗಿ ಮಾರ್ಪಾಡಾಯಿತು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.