ವಿಜಯಪುರ: ಕಾಂಗ್ರೆಸ್ 65 ವರ್ಷಗಳ ಕಾಲ ದೇಶವನ್ನು ಆಳಿದರೂ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ 11 ವರ್ಷದ ಆಡಳಿತಾವಧಿಯಲ್ಲಿ ಮೋದಿ ಸರ್ಕಾರ ಮಾಡಿದೆ ಎಂದ ಸಂಸದ ರಮೇಶ ಜಿಗಜಿಗಜಿಣಗಿ, ಇದೀಗ ಜು. 1 ರಂದು ಗಣೇಶ ನಗರದ ರೈಲ್ವೆ ಕೆಳಸೇತುವೆಗೆ ಭೂಮಿ ಪೂಜೆ ನೆರವೇರಿಸುತ್ತಿರುವುದಾಗಿ ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. 61 ಕೋಟಿ ರೂಪಾಯಿ ಅನುದಾನದಲ್ಲಿ 12 ರೈಲ್ವೆ ಕೆಳಸೇತುವೆ, 130.6 ಕೋಟಿ ರೂಪಾಯಿ ಅನುದಾನದಲ್ಲಿ 5 ರೈಲ್ವೆ ಮೇಲ್ಸೇತುವೆಗಳು ಸೇರಿ ಒಟ್ಟು 191.60 ಕೋಟಿ ರೂಪಾಯಿ ಅನುದಾನದಡಿ ಕಾಮಗಾರಿ ಕೈಗೊಳ್ಳಲಾಗಿದೆ. ಇದೀಗ ಗಣೇಶ ನಗರದ ರೈಲ್ವೆ ಕೆಳಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಇನ್ನು ಆರು ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿಜಯಪುರದಿಂದ ಅರಕೇರಿ-ಸಿದ್ದಾಪುರ ನಡುವಿನ 11.627 ಕಿಮೀ ರಸ್ತೆ ಅಭಿವೃದ್ಧಿಗೆ 80.19 ಕೋಟಿ ರೂಪಾಯಿ, ತಿಕೋಟಾ-ಕನಮಡಿ ನಡುವಿನ 23.31 ಕಿಮೀ ರಸ್ತೆ ಅಭಿವೃದ್ಧಿಗೆ 196.05, ವಿಜಯಪುರ-ಅಥಣಿ ನಡುವಿನ 79.70 ಕಿಮೀ ರಸ್ತೆಗೆ 766.00 ಕೋಟಿ, ವಿಜಯಪುರ-ಮಹಾರಾಷ್ಟ್ರದ ಮುರಮ್ ನಡುವಿನ 102.3 ಕಿಮೀ ರಸ್ತೆಗೆ 957.09 ಕೋಟಿ ಹಾಗೂ ವಿಜಯಪುರ-ಕೊಲ್ಹಾರ ನಡುವಿನ 51.67 ಕಿಮೀ ರಸ್ತೆಗೆ 258.02 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಇನ್ನೊಂದು ರಸ್ತೆ ಸೇರಿ ಒಟ್ಟು ಆರು ರಾಷ್ಟ್ರೀಯ ಹೆದ್ದಾರಿಗಳಿಗೆ 2257.35 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದರು.
ಇನ್ನು ಭಾರತ ಸರ್ಕಾರದ ಅಧೀನದಲ್ಲಿರುವ 2 ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಸೋಲಾಪುರ-ವಿಜಯಪುರ (ಎನ್‌ಎಚ್-52) ನಡುವಿನ 110.00 ಕಿಮೀ ರಸ್ತೆಯನ್ನು 1800 ರೂ.ಹಾಗೂ ವಿಜಯಪುರ-ಹುಮನಾಬಾದ್ (ಎನ್‌ಎಚ್-50) ನಡುವಿನ 220.00 ಕಿಮೀ ರಸ್ತೆಯನ್ನು 509.30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿಜಯಪುರ ನಗರದಲ್ಲಿ ವರ್ತುಲ ರಸ್ತೆ ಮತ್ತು ಚತುಷ್ಪಥ ಹೆದ್ದಾರಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. 2022-23ನೇ ಸಾಲಿನಲ್ಲಿ ಆರ್‌ಐಡಿಎಫ್ (ನಬಾರ್ಡ್ ಯೋಜನೆ) ಅಡಿಯಲ್ಲಿ ಶಾಲೆ, ಕಾಲೇಜು ಹಾಗೂ ವಸತಿನಿಲಯಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಅದಕ್ಕಾಗಿ 1296.90 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದರು.
ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮೋದಿ ಸರ್ಕಾರ ಮಾಡಿದೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ. ಕಾಂಗ್ರೆಸ್ ಸರ್ಕಾರ ಕೇವಲ ಕುಟುಂಬ ರಾಜಕಾರಣದಲ್ಲಿಯೇ ಕಾಲಹರಣ ಮಾಡಿತಲ್ಲದೇ ದೇಶಕ್ಕಿಂತ ಸ್ವಂತ ಏಳಿಗೆಗೆ ಶ್ರಮಿಸಿತು. ಜಾತಿ-ಜಾತಿಗಳ ಮಧ್ಯೆ ಎತ್ತಿ ಕಟ್ಟುವ ಕೆಲಸ ಮಾಡಿತು. ಹೀಗಾಗಿ ಜನ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಗೆ ಅಧಿಕಾರಕ್ಕೆ ತಂದರು. ಬಿಜೆಪಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆಯಲ್ಲದೇ ಅಪಾರ ಅನುದಾನ ಬಿಡುಗಡೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾಂಗ್ರೆಸ್ ಶಾಸಕರುಗಳು ಬಿಜೆಪಿಯ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರಾದರೂ ಎಲ್ಲೂ ಸಹ ಮೋದಿ ಹೆಸರು ಬಳಸದಿರುವುದು ಖೇದಕರ ಎಂದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಜೂನ್ 30 ರಂದು ನಗರದ ಸಾಯಿ ವಿಹಾರದಲ್ಲಿ ತುರ್ತು ಪರಿಸ್ಥಿತಿ ಕುರಿತು ಚರ್ಚಾಕೂಟ ಏರ್ಪಡಿಸಲಾಗಿದ್ದು, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪುರ, ಸಂಜಯ ಪಾಟೀಲ ಕನಮಡಿ, ಚಂದ್ರಶೇಖರ ಕವಟಗಿ, ಈರಣ್ಣ ರಾವೂರ, ವಿಜಯ ಜೋಷಿ ಮತ್ತಿತರರಿದ್ದರು.