ಜಿಲ್ಲೆ

ಕಾಂಗ್ರೆಸ್‌ಗೆೆ ಅಭ್ಯರ್ಥಿಗಳಿಲ್ಲದೆ ಸಚಿವರುಗಳನ್ನು ಕಣಕ್ಕಿಳಿಸುತ್ತಿದೆ: ಪ್ರತಾಪ್ ಸಿಂಹ ಟೀಕೆ

ಸದೇಶ್ ಕಾರ್ಮಾಡ್

ಮೈಸೂರು: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ನಾನು ಯಾವತ್ತೂ ನನ್ನ ಎದುರಾಳಿಯನ್ನು ನೋಡಲ್ಲ, ಪ್ರಧಾನಿ ನರೇಂದ್ರ ಮೋದಿ ಹೆಸರಿನ ಮುಂದೆ ಯಾವ ಎದುರಾಳಿ ಹೆಸರು ನಡೆಯುವುದಿಲ್ಲ ಎಂದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈಸೂರು- ಕೊಡಗು ಕ್ಷೇತ್ರ ಜೆಡಿಎಸ್ ಪಾಲಾಗಲಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ನೀಡಿದೆ. ಕಾಂಗ್ರೆಸ್‌ಗೆ ಊರ ಉಸಾಬರಿ ಯಾಕೆ? ಅವರು ಅವರ ಅಭ್ಯರ್ಥಿ ಯಾರು ಎಂಬುದನ್ನು ನೋಡಿಕೊಳ್ಳಲಿ. ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಗೆ ಅಭ್ಯರ್ಥಿಗಳೇ ಇಲ್ಲ. ಅಭ್ಯರ್ಥಿಗಳು ಇಲ್ಲದೆ ಮಂತ್ರಿಗಳನ್ನು ನಿಲ್ಲಿಸುವ ದೈನಾಸಿ ಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ ಎಂದು ಟೀಕಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಈ ಕ್ಷೇತ್ರದಲ್ಲಿ ನನ್ನ ಪರ ಎರಡು ಪಕ್ಷದ ನಾಯಕರ ಆಶೀರ್ವಾದವಿದೆ. ಡಾ.ಯತೀಂದ್ರ ಸಿದ್ದರಾಮಯ್ಯ ನನ್ನ ಎದುರಾಳಿಯಾದರೆ ಒಳ್ಳೆಯದು. ಡಾ.ಯತೀಂದ್ರ ಸನ್ ಆಫ್ ಸಿದ್ದರಾಮಯ್ಯ ವರ್ಸಸ್ ಪತ್ರಕರ್ತ ಪ್ರತಾಪ್ ಸಿಂಹ ನಡುವೆ ಫೈಟ್ ನಡೆಯುತ್ತದೆ ಎಂದರು.

ಜನವರಿ 22ರ ಬಳಿಕ ಅಯೋಧ್ಯೆಗೆ ಹೋಗಿಬರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ರಾಮ ಜನ್ಮಭೂಮಿಗಾಗಿ ರಥಯಾತ್ರೆ ಮಾಡಿದವರು ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ. ನ್ಯಾಯಾಲಯದಲ್ಲಿ ಹೋರಾಟ ನಡೆಸಿದವರು ರವಿಶಂಕರ್ ಪ್ರಸಾದ್. ನಂತರ ದೇಶಾದ್ಯಂತ ಈ ಬಗ್ಗೆ ಅಭಿಪ್ರಾಯ ಮೂಡಿಸಿದವರು ಪ್ರಧಾನಿ ನರೇಂದ್ರ ಮೋದಿ. ಅಡ್ವಾಣಿಯಿಂದ ಮೋದಿವರೆಗೆ ರಾಮಜನ್ಮ ಭೂಮಿ ವಿಚಾರದಲ್ಲಿ ಬಿಜೆಪಿ ಪಾತ್ರ ದೊಡ್ಡದಿದೆ. ರಾಮಜನ್ಮ ಭೂಮಿ ವಿಚಾರದಲ್ಲಿ ಕಾಂಗ್ರೆಸ್‌ನವರ ಯಾವ ಪಾತ್ರವೂ ಇಲ್ಲ. ಹೀಗಾಗಿ ಅವರಿಗೆ ಅಪರಾಧಿ ಪ್ರಜ್ಞೆ ಇದೆ. ಅಪರಾಧಿ ಪ್ರಜ್ಞೆ ಕಾರಣ ಅವರು ಉದ್ಘಾಟನೆಯಿಂದ ಹಿಂದೆ ಸರಿದಿದ್ದಾರೆ. ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದ ಕಾಂಗ್ರೆಸ್ ತನ್ನ ಪಾಪ ತೊಳೆದುಕೊಳ್ಳಲು ಸಿದ್ದರಾಮಯ್ಯ ಅವರು ತಮ್ಮ ಶಿಷ್ಯರ ಜತೆಗೆ ಅಯೋಧ್ಯೆಗೆ ಹೋಗಿ ಬರಲಿ ಎಂದು ವಾಗ್ದಾಳಿ ನಡೆಸಿದರು.