ಪಾ.ಶ್ರೀ.ಅನಂತರಾಮ್ ಕೋಲಾರ
ಸಂಸದರಾದ ಮೇಲೆ ಮೊದಲ ಬಾರಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಂಸದ ಎಸ್.ಮುನಿಸ್ವಾಮಿ ಅವರಿಗೆ ರಾಜಕಾರಣ ಮತ್ತು ಜಿಲ್ಲೆಯ ಅಭಿವೃದ್ಧಿಯ ಹಿತೋಪದೇಶದ ಜತೆಗೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮುನಿಸಿಗೂ ಮಾಜಿ ಸ್ಪೀಕರ್ ಮುಲಾಮು ಹಚ್ಚಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಮೂರು ದಿನಗಳ ಹಿಂದೆ ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಅವರ ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದ ಸಂಸದರು ಹಾಗೂ ಬಂಗಾರಪೇಟೆ ಶಾಸಕರು ಜಿಲ್ಲೆಯ ಬಹುತೇಕ ಬಲಗೈ ಸಮುದಾಯಕ್ಕೆ ಸೇರಿದ ಮುಖಂಡರ ಸಲಹೆ ಮೇರೆಗೆ ಅಡ್ಡಗಲ್‌ನ ರಮೇಶ್‌ಕುಮಾರ್ ನಿವಾಸಕ್ಕೆ ತೆರಳಿದ್ದರು ಎನ್ನಲಾಗಿದೆ.
ನಿಮ್ಮ ನಿಮ್ಮ ಪಾರ್ಟಿ ಬೇರೆ: ಸಂಸದರ ಜತೆ ಮಾತುಕತೆ ಆರಂಭಿಸಿದ ರಮೇಶ್‌ಕುಮಾರ್, ನೋಡಿ ಮುನಿಸ್ವಾಮಿ, ನಾನು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸಿದವನಲ್ಲ. ನಮ್ಮಿಬ್ಬರ ಪಾರ್ಟಿ ಬೇರೆ, ಆದರೆ ಪಕ್ಷಾತೀತವಾಗಿ ಗೆದ್ದಿರುವುದರಿಂದ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ. ಆಗ ಮುನಿಸ್ವಾಮಿ, ಕಳೆದ ಒಂದು ವರ್ಷದ ಅವಧಿಯಲ್ಲಿ ತಾರತಮ್ಯ ಮಾಡದೆ ಪಕ್ಷಾತೀತವಾಗಿ ಕೆಲಸ ಮಾಡುತ್ತಿರುವೆ. ನನ್ನ ಬಗ್ಗೆ ಏನಾದರೂ ದೂರು, ಅಸಮಾಧಾನಗಳಿದ್ದಲ್ಲಿ ತಿಳಿಸಿದರೆ ತಿದ್ದಿಕೊಳ್ಳುವೆ ಎಂದಾಗ, ರಮೇಶ್‌ಕುಮಾರ್ ಛೆ..ಛೇ.. ಅಂತಹದೇನೂ ಇಲ್ಲ, ನಿಮ್ಮ ಕೆಲಸ ಗಮನಿಸುತ್ತಿದ್ದೇನೆ. ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ನಿಮ್ಮ ನಡೆ ನನಗೆ ಇಷ್ಟವಾಗಿದೆ. ಇದೇ ರೀತಿ ಮುಂದುವರಿಸಿಕೊಂಡು ಹೋಗಿ ಎಂದು ಸಲಹೆ ನೀಡಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮುಖಂಡರ ಸಮಕ್ಷಮ: ಪಕ್ಷದ ವಿಚಾರ ಬಂದಾಗ, ನೋಡಿ ಎಂಪಿ ಸಾಹೇಬರೇ... ನಾನು ಆಗ್ಲೇ ಹೇಳಿದ್ದೇನೆ, ಈಗ ನೀವು ನಮಗೆ ಎಂಪಿ ಅಷ್ಟೇ, ಚುನಾವಣೆ ಬಂದಾಗ ರಾಜಕಾರಣ ಇದ್ದೇ ಇರುತ್ತೆ, ನೀವು ಯಾರನ್ನಾದರೂ ಬೆಳೆಸಿ, ನನ್ನ ಅಭ್ಯಂತರವಿಲ್ಲ, ಆದರೆ ಒಂದು ಮಾತು, ಪ್ರಸ್ತುತ ನಿಮ್ಮ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದೆ. ಇದನ್ನು ಉಳಿಸಿಕೊಂಡು ಹೋಗಿ, ಒಳ್ಳೆಯ ಬೀಜ ಬಿತ್ತಿದರೆ ಉತ್ತಮ ಫಸಲು ಸಿಗುತ್ತದೆ ಎಂದು ಕೃಷ್ಣನ ರೀತಿಯಲ್ಲಿ ನೀಡಿದ ಸಲಹೆಗೆ ಮುನಿಸ್ವಾಮಿ ಶಿರಬಾಗಿ ಗೌರವ ಸೂಚಿಸಿದ್ದನ್ನು ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಸೋಲಿಗೆ ಪ್ರಮುಖ ಪಾತ್ರ ವಹಿಸಿದ್ದ ಬಲಗೈ ಮುಖಂಡರು ಸಾಕ್ಷೀಕರಿಸಿದರು ಎನ್ನಲಾಗಿದೆ.
ಶಾಸಕದ್ವಯರ ನಡುವೆ ರಾಜಿ!: ಇದೇ ವೇಳೆ ಅಭಿವೃದ್ಧಿ ವಿಚಾರದಲ್ಲಿ ಅನಗತ್ಯ ಮೂಗು ತೂರಿಸುತ್ತಾರೆಂಬ ಕಾರಣಕ್ಕೆ ರಮೇಶ್‌ಕುಮಾರ್ ವಿರುದ್ಧ ಮುನಿಸಿಕೊಂಡಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಅಡ್ಡಗಲ್‌ಗೆ ಕರೆದೊಯ್ಯಲು ಜಿಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಹಾಗೂ ಬಲಗೈ ಮುಖಂಡರು ಸಫಲರಾದರು ಎನ್ನಲಾಗಿದೆ.
ಮಾತುಕತೆ ವೇಳೆ ಇಬ್ಬರೂ ತಪ್ಪು ಗ್ರಹಿಕೆಯಿಂದ ಗ್ಯಾಪ್ ಆಗಿದೆ, ನಾನು ನನ್ನ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿಮ್ಮವಿರುದ್ಧ ಮಾತನಾಡಿಯೇ ಇಲ್ಲ, ಜಿಲ್ಲೆಯ ಎಲ್ಲ ಶಾಸಕರಿಗೂ ಮಾತನಾಡುವ ಅಧಿಕಾರವಿದೆ, ಕೆಲವೊಂದು ಸಲ ಹಿರಿಯನಾಗಿ ಸಮಸ್ಯೆ ನಿವಾರಿಸಲು ಮಧ್ಯ ಪ್ರವೇಶಿಸಿರುವುದು ನಿಜ, ನಿಮ್ಮಬಗ್ಗೆ ನನಗೆ ಯಾವುದೇ ಈರ್ಷ್ಯೆ ಇಲ್ಲ. ನೀವು ಬೆಳೆಯಬೇಕಾದವರು, ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಮುಕ್ತವಾಗಿ ಚರ್ಚಿಸಲು ಸದಾ ಸಿದ್ಧ ಎಂದು ರಮೇಶ್‌ಕುಮಾರ್ ಸ್ಪಷ್ಟನೆ ನೀಡುತ್ತಿದ್ದಂತೆ, ನನಗೂ ನಿಮ್ಮ ಮೇಲೆ ಗೌರವ ಇದೆ, ನಿಮ್ಮ ಮಾರ್ಗದರ್ಶನ, ಆಶೀರ್ವಾದ ಬೇಕು, ಇನ್ಮುಂದೆ ಎಲ್ಲರೂ ಒಟ್ಟಾಗಿರೋಣ ಎಂಬ ನಿರ್ಧಾರಕ್ಕೆ ಇಬ್ಬರೂ ಬಂದಿದ್ದಾರೆ.
ಶಾಸಕದ್ವಯರ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಬೀಳುತ್ತಿದ್ದಂತೆ ಅಲ್ಲಿದ್ದ ಮಾಜಿ ಶಾಸಕ ವೈ.ಸಂಪಂಗಿ, ಸಿ.ಎಂ.ಮುನಿಯಪ್ಪ, ವಿಜಯಕುಮಾರ್, ವಕ್ಕಲೇರಿ ರಾಜಪ್ಪ, ಅಂಬರೀಷ್, ಗೊಲ್ಲಹಳ್ಳಿ ಶಿವಪ್ರಸಾದ್ ಇನ್ನಿತರರು ಸಂತಸ ವ್ಯಕ್ತಪಡಿಸಿದರೆ, ಇತ್ತ ಮಾಜಿ ಸಂಸದ ಕೆಎಚ್‌ಎಂ ವಲಯದಲ್ಲಿ ಗುಸುಗುಸು ಕೇಳಿ ಬಂದಿದ್ದು, ಕ್ಲೈಮ್ಯಾಕ್ಸ್ ಏನಾಗುತ್ತದೋ ನೋಡಬೇಕು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಮನೆಯಲ್ಲಿ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಮುಖಂಡರು ಸೇರಿದ್ದು ನಿಜ. ಆ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಕೆಲವೊಂದು ಸಲಹೆ ನೀಡಿದರು. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣ ಸಲ್ಲದು ಎಂದು ಹೇಳಿದ್ದನ್ನು ಎಲ್ಲರೂ ಒಪ್ಪಬೇಕಾದ ವಿಚಾರ. ವಕ್ಕಲೇರಿ ರಾಜಪ್ಪ, ದಲಿತ ಮುಖಂಡ, ಕೋಲಾರ