ಜಿಲ್ಲೆ

ಸಿಎಂ ಸಿದ್ದರಾಮಯ್ಯ 'ಯುದ್ಧ ಬೇಡ' ಹೇಳಿಕೆ ದುರಾದೃಷ್ಟಕರ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಖಂಡನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರು ಪ್ರವಾಸಿಗರ ಧರ್ಮ ಯಾವುದೆಂದು ವಿಚಾರಿಸಿ, ಹಿಂದುಗಳನ್ನು ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ. ಭಯೋತ್ಪಾದನೆ ಮತ್ತು ಭಯೋತ್ಪಾದಕರ ಮನಸ್ಥಿತಿ ಹೇಗಿರುತ್ತದೆ ಎಂಬ ಸಂಗ ತಿಳಿದಿದ್ದರೂ ಸಹ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಹಿತ ಕಾಯುವ ರೀತಿಯಲ್ಲಿ ಯುದ್ಧ ಬೇಡ ಎಂದಿದ್ದಾರೆ. ಓರ್ವ ಮುಖ್ಯಮಂತ್ರಿಯಾಗಿ ಅವರ ಈ ಹೇಳಿಕೆ ದುರಾದೃಷ್ಟಕರ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಏ.24ರಂದು ಮಾಧ್ಯಮದವರೊಂದಿಗೆ ಮಾತನಾಡಿ, ನಿಮ್ಮ ವಯಸ್ಸು ಹಾಗೂ ರಾಜಕೀಯದ ಹಿರಿತನಕ್ಕೆ ನಮ್ಮ ಗೌರವವಿದೆ. ಅಧಿಕಾರ ಬರುತ್ತೆ ಹೋಗುತ್ತೆ. ಆದರೆ, ದೇಶಕ್ಕೆ ಗಂಡಾಂತರ ಬಂದಿರುವ ಈ ಸಂದರ್ಭದಲ್ಲಿ ಹೀಗೆಲ್ಲ ಮಾತನಾಡಬೇಡಿ ಎಂದರು.

ಪಾಕಿಸ್ತಾನದಲ್ಲಿ ನಾಯಕರಾದರು

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಯುದ್ಧ ಘೋಷಣೆ ಮಾಡಿದ್ದರು. ಆಗ ಆರ್​ಎಸ್​ಎಸ್​, ವಾಜಪೇಯಿ, ಜನಸಂಘ ಎಲ್ಲರೂ ಬೆಂಬಲಿಸಿದ್ದರು. ರಾಜಕೀಯವೇ ಬೇರೆ, ದೇಶದ ವಿಚಾರವೇ ಬೇರೆ ಎನ್ನುವುದನ್ನು ಮೊದಲು ಅರಿತುಕೊಳ್ಳಿ. ವೋಟ್​ ಬ್ಯಾಂಕ್​ ಹಾಗೂ ಧರ್ಮದ ಕಾರಣಕ್ಕೆ ಭಾರತೀಯ ಹಿಂದುಗಳ ಹತ್ಯೆಯನ್ನು ಸಮರ್ಥಿಸುವುದು ನಿಮ್ಮ ಹುದ್ದೆಗೆ ಗೌರವ ತರುವುದಿಲ್ಲ. ಯುದ್ಧ ಬೇಡ ಎನ್ನುವ ಮೂಲಕ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ದೊಡ್ಡ ಮುಖಂಡರಾಗಿದ್ದಾರೆ. ಅಲ್ಲಿನ ದೃಶ್ಯ ಮಾಧ್ಯಮಗಳೂ ಅವರನ್ನು ಹೊಗಳತೊಡಗಿವೆ ಎಂದರು.

ದೇಶಕ್ಕೆ ನಿಮ್ಮ ಶಕ್ತಿ ಕೊಡಿ

ಯುದ್ಧ ಮಾಡಿದರೆ ಸತ್ತವರ ಜೀವ ಮತ್ತೆ ಬರುತ್ತಾ ಎಂದು ಪ್ರಶ್ನಿಸುತ್ತೀರಿ. ಹಾಗಾದರೆ, ಸಾಯುವವರು ಸಾಯಲಿ ಎಂದು ಅರ್ಥವೇ? ಮೈಸೂರಿನಲ್ಲಿ ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿದಾಗ, ಎಂಎಲ್​ಎ ಮನೆಗೆ ಬೆಂಕಿ ಇಟ್ಟಾಗ ಭದ್ರತಾ ವೈಫಲ್ಯ ಆಗಿರಲಿಲ್ಲವೇ? ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎಂದಾಗ ಸಹಾನುಭೂತಿ ತೋರಿಸಿಲ್ಲವೇ? ದೇಶಕ್ಕೆ ತೊಂದರೆ ಆದಾಗ ಮುಖ್ಯಮಂತ್ರಿ ಆದವರು ಶಕ್ತಿ ನೀಡಬೇಕು. ಯುದ್ಧ ಅನಿವಾರ್ಯವಾದರೆ ಬೆಂಬಲಿಸಬೇಕು ಎಂದರು.

ಲಾಡ್​ ದೊಡ್ಡ ಮನುಷ್ಯನಲ್ಲ

ಪ್ರಧಾನಿ ಮೋದಿ ಅವರನ್ನು ಟೀಕಿಸಿದ ಸಚಿವ ಸಂತೋಷ ಲಾಡ್​ ಕುರಿತು ನನಗೆ ಪ್ರತಿಕ್ರಿಯೆ ಕೊಡಬೇಕು ಅನಿಸುತ್ತಿಲ್ಲ. ಆದರೆ, ಸಚಿವ ಸ್ಥಾನದಲ್ಲಿರುವುದರಿಂದ ತೂಕದ ಮಾತನಾಡಬೇಕು. ಇಲ್ಲವಾದರೆ ನಗೆಪಾಟಲಿಗೆ ಈ ಡಾಗುತ್ತೀರಿ. ದೇಶ ಪ್ರಧಾನಿ ವಿರುದ್ಧ ಮಾತನಾಡುವಷ್ಟು ಅವರು ದೊಡ್ಡ ಮನುಷ್ಯನಲ್ಲ. ಪಾಕಿಸ್ತಾನ ಸೇರಿದಂತೆ ವಿಶ್ವವೇ ಮೋದಿ ಅವರ ಆಡಳಿತ ದಕ್ಷತೆ, ಪ್ರಾಮಾಣಿಕತೆ ಕಂಡು ಅಚ್ಚರಿ ಪಡುತ್ತದೆ. ಗೌರವ ಕೊಡುತ್ತದೆ. ಆದರೆ, ಲಾಡ್​ ಅವರಿಗೆ ಇನ್ನೂ ಅರ್ಥವಾಗಿಲ್ಲ ಎಂದರು.