ಉಡುಪಿಯ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಂಸದ ಕೋಟ ಪೂಜಾರಿ ಸಭೆ ನಡೆಸಿದರು. ಜಿಲ್ಲೆಯ ಸ್ಥಳೀಯಾಡಳಿತದ ವಿವಿಧ ಅಧಿಕಾರಿಗಳು ಇದ್ದರು. 
ಜಿಲ್ಲೆ

ವಸತಿ ಯೋಜನೆಗಳಿಗೆ 475 ಕೋಟಿ ರೂ. ಬಿಡುಗಡೆ

ಸಂಸದ ಶ್ರೀನಿವಾಸ್​ ಪೂಜಾರಿ ಮಾಹಿತಿ | ಪ್ರಗತಿ ಪರಿಶೀಲನಾ ಸಭೆ

ಉಡುಪಿ: ರಾಜ್ಯಕ್ಕೆ ಹಿಂದಿನ ವರ್ಷಗಳ ವಸತಿ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದಿಂದ ಗ್ರಾಮೀಣ ವಸತಿ ಯೋಜನೆಗೆ 400 ಕೋಟಿ ರೂ. ಮತ್ತು ನಗರ ವಸತಿ ಯೋಜನೆಗೆ 75 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಮಾಹಿತಿ ನೀಡಿದರು.

ಉಡುಪಿಯ ತಮ್ಮ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ಸ್ಥಳೀಯಾಡಳಿತ, ಪುರಸಭೆ, ಪಪಂ ಮತ್ತು ನಗರಸಭೆ ಅಧಿಕಾರಿಗಳೊಂದಿಗೆ ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್​ ವಸತಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಅನುದಾನ ಬಿಡುಗಡೆ ಮಾಡಿ

ಶೇ. 80ರಷ್ಟು ಮಾತ್ರ ಬಡವರ ವಸತಿ ಯೋಜನೆ ಅನುಷ್ಠಾನವಾಗಿದೆ. ಸಾಧ್ಯವಾದಷ್ಟು ಬೇಗ ವಸತಿ ಯೋಜನೆಯ ಪ್ರಗತಿ ನಡೆಸಿ, ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಸಂಸದ ಕೋಟ ಸೂಚಿಸಿದರು.

ಪಿಎಂ ಸ್ವ-ನಿಧಿ ಯೋಜನೆ

ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಬೀದಿ ವ್ಯಾಪಾರಿಗಳು ಮತ್ತು ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಪಿಎಂ ಸ್ವ-ನಿಧಿ ಯೋಜನೆಯನ್ನು ಗರಿಷ್ಠ ಪ್ರಮಾಣದಲ್ಲಿ ನೀಡಬೇಕು. ಈ ಬಗ್ಗೆ ಅರ್ಜಿ ಅಹ್ವಾನಿಸಿ ರಾಷ್ಟ್ರೀಕೃತ ಬ್ಯಾಂಕ್​ನ ಮೂಲಕ ಸಾಲ ಸೌಲಭ್ಯ ಒದಗಿಸಲು ಶಿಫಾರಸು ಮಾಡಬೇಕು. ಅಕ್ಟೋಬರ್​ ಮೊದಲ ವಾರದೊಳಗೆ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗುವಂತಾಗಬೇಕು ಎಂದು ನಗರಾಡಳಿತ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸಂಸದ ಕೋಟ ತಾಕೀತು ಮಾಡಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರವೀಂದ್ರ, ಉಡುಪಿ ನಗರಸಭೆ, ಕಾಪು ಪುರಸಭೆ, ಕಾರ್ಕಳ ಪುರಸಭೆ, ಕುಂದಾಪುರ ಪುರಸಭೆ, ಬೈಂದೂರು ಪಟ್ಟಣ ಪಂಚಾಯಿತಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಸತಿ ಯೋಜನೆಯ ನೋಡಲ್​ ಅಧಿಕಾರಿಗಳು ಇದ್ದರು.