ವಿಜಯವಾಣಿ ಸುದ್ದಿಜಾಲ ಉಡುಪಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಚಲಾಯಿಸುವವರು ಟೋಲ್ ಶುಲ್ಕ ಪಾವತಿಸಿ ಸಂಚಾರ ಕೈಗೊಳ್ಳುತ್ತಾರೆ. ಟೋಲ್ ಶುಲ್ಕ ಪಡೆವ ಗುತ್ತಿಗೆದಾರರು ಸರಿಯಾಗಿ ಹೆದ್ದಾರಿಯ ನಿರ್ವಹಣೆ ಮಾಡುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಆದರೆ, ಇತ್ತೀಚೆಗೆ ಹೆದ್ದಾರಿಯಲ್ಲಿ ಅಪಘಾತದಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಭಿಯಂತರರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-66ರ ಕಾಮಗಾರಿಗಳ ಪ್ರಗತಿ ಚರ್ಚಿಸಲು ಸೆಪ್ಟೆಂಬರ್ 2ರಂದು ಬೆಳಗ್ಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಹೆದ್ದಾರಿಯಲ್ಲಿ ಎರಡು ವರ್ಷದಲ್ಲಿ 250ಕ್ಕೂ ಹೆಚ್ಚು ಅಪಘಾತಗಳು ಉಂಟಾಗಿದೆ. ಕೇವಲ ಎರಡು ತಿಂಗಳಲ್ಲಿ 8 ಜನ ಅಪಘಾತದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗುತ್ತಿಗೆದಾರರು ಟೋಲ್ ಸಂಗ್ರಹಿಸುವುದನ್ನೇ ಗುರಿ ಮಾಡಿಕೊಂಡರೆ ಆಗದು. ಹೆಚ್ಚು ಅಪಘಾತವಾಗುತ್ತಿರುವ ಕಪ್ಪು ಚುಕ್ಕೆ ಸ್ಥಳಗಳಲ್ಲಿ ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಹೆಜಮಾಡಿಯಿಂದ ಕುಂದಾಪುರ ವರೆಗೆ (66 ಕಿಮೀ) ಸರ್ವೀಸ್ ರಸ್ತೆ ನಿರ್ಮಿಸಬೇಕಿದೆ. ಪ್ರಸ್ತುತ ಕೋಟೇಶ್ವರದಿಂದ ಹೆಜಮಾಡಿವರೆಗೆ 26 ಕಿಮೀ ಸರ್ವೀಸ್ ರಸ್ತೆ ಹಾಗೂ 3 ಓವರ್ ಬ್ರಿಡ್ಜ್ ಕಾಮಗಾರಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಅಗತ್ಯವಿರುವ ಸಾಮಾಗ್ರಿ ಸಂಗ್ರಹಿಸಿ ಕಾಮಗಾರಿ ಪ್ರಾರಂಭಿಸಬೇಕು. ಪಡುಬಿದ್ರೆ, ಬ್ರಹ್ಮಾವರ ಹಾಗೂ ಕೋಟದಲ್ಲಿ ಮೇಲ್ಸೇತುವೆ ನಿರ್ಮಿಸಲು ಕೂಡಲೇ ಡಿಪಿಆರ್ ಸಿದ್ಧಪಡಿಸಿದರೆ ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಕೊಡಿಸಲಾಗುವುದು ಎಂದು ಕೋಟ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಸಹಾಯಕ ಕಮಿಷನರ್ ರಶ್ಮಿ, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲ ಮೊಹಮ್ಮದ್ ಅಜ್ಮಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಗುತ್ತಿಗೆದಾರರು, ಅಭಿಯಂತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಹೆದ್ದಾರಿಗಳಲ್ಲಿ ಅಳವಡಿಸಿರುವ ದಾರಿದೀಪಗಳು ಪ್ರಕಾಶಮಾನವಾಗಿಲ್ಲ. ಕನಿಷ್ಠ 240 ವೋಲ್ಟ್ನ ಬಲ್ಬ್ ಅಳವಡಿಸಬೇಕೆಂದು ಸೂಚಿಸಿದರು. ಶಾಸಕ
ಯಶ್ಪಾಲ್ ಸುವರ್ಣ ಮಾತನಾಡಿ, ಉದ್ಯಾವರದಿಂದ ಬಲೈಪಾದೆವರೆಗಿನ ಸರ್ವೀಸ್ ರಸ್ತೆಗೆ ಅಗತ್ಯವಿರುವ ಭೂಸ್ವಾಧಿನ ಪ್ರಕ್ರಿಯೆ ನಡೆಸಬೇಕು ಎಂದರು. ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಪಡುಬಿದ್ರೆಯಲ್ಲಿ ರಸ್ತೆ ಅಪಘಾತ ಹೆಚ್ಚುತ್ತಿದ್ದು ಸಾವು-ನೋವಿನ ಪ್ರಕರಣ ಉಂಟಾಗುತ್ತಿದೆ. ಆದ್ಯತೆಯ ಮೇಲೆ ಇಲ್ಲಿ ಮೇಲ್ಸೇತುವೆ ಕಾಮಗಾರಿ ಕೈಗೊಂಡಲ್ಲಿ ಅಪಘಾತ ಪ್ರಕರಣ ತಡೆಯಬಹುದು ಎಂದರು. ರಾಷ್ಟ್ರೀಯ ಹೆದ್ದಾರಿ ಉಳಿಸಿ ಸಮಿತಿಯ ಸದಸ್ಯರು ಮಾತನಾಡಿ, ಬ್ರಹ್ಮಾವರ ನಗರ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ, ಮೇಲ್ಸೇತುವೆ, ವಿದ್ಯುತ್ ದೀಪ ಅಳವಡಿಕೆ, ರಸ್ತೆಯ ಮೀಡಿಯನ್ ಓಪನಿಂಗ್ ಸೇರಿದಂತೆ ಅಗತ್ಯವಿರುವ ಕಾಮಗಾರಿ ಕೈಗೊಂಡು ಅಪಘಾತ ತಡೆಯಬೇಕು ಎಂದರು.
ಹೆದ್ದಾರಿಯಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವ ಹಾಗೆ ದೊಡ್ಡದಾಗಿ ಸೂಚನಾ ಫಲಕ ಅಳವಡಿಸಬೇಕು. ರಾತ್ರಿವೇಳೆ ಸರಿಯಾಗಿ ರಸ್ತೆ ಕಾಣಿಸುವಂತೆ ದೀಪ ಅಳವಡಿಸಬೇಕು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಿಂಗಳ ಒಳಗಾಗಿ ಈ ಕಾರ್ಯ ಕೈಗೊಂಡು ಅಪಘಾತ ಮುಕ್ತ ವಲಯ ನಿರ್ಮಿಸಬೇಕು. ಹೆದ್ದಾರಿಯಲ್ಲಿ ಮತ್ತೆ ಅಪಘಾತ ಸಂಭವಿಸಿ ಜೀವಹಾನಿಯಾದರೆ ನಿಮ್ಮನ್ನೇ ಪ್ರಕರಣದ ಅಪರಾಧಿಯನ್ನಾಗಿ ಮಾಡಲಾಗುವುದು. | ಕೋಟ ಶ್ರೀನಿವಾಸ ಪೂಜಾರಿ. ಸಂಸದ