ಜಿಲ್ಲೆ

ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚು ತೋರಿಸುವ ತಂತ್ರ

ಗೋಪಾಲಕೃಷ್ಣ ಪಾದೂರ್

ಉಡುಪಿ: ಮುಖ್ಯಮಂತ್ರಿ ತನಗೆ ಒದಗಿರುವ ಕುರ್ಚಿ ಕಂಟಕ ತಪ್ಪಿಸಿಕೊಳ್ಳಲು ಜನಗಣತಿಯನ್ನು ಮುನ್ನಲೆಗೆ ತಂದಿದ್ದಾರೆ. ಲಿಂಗಾಯಿತರು ಮತ್ತು ಒಕ್ಕಲಿಗರನ್ನು ವಿಂಗಡಿಸಿ ಸಮಾಜ ಒಡೆಯಲಾಗಿದೆ. ಅಲ್ಪಸಂಖ್ಯಾತರನ್ನು ಒಂದೇ ಜಾತಿ ಎಂದು ಪರಿಗಣಿಸಲಾಗಿದೆ. ವರದಿ ಗಮನಿಸಿದರೆ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚು ತೋರಿಸುವ ತಂತ್ರ ನಡೆಯುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಕರ್ಮರು, ಈಡಿಗರು, ಬಲಿಜಿಗರು 30 ರಿಂದ- 35 ಲಕ್ಷ ಇದ್ದೇವೆ ಎನ್ನುತ್ತಾರೆ. ಆದರೆ ವರದಿ 11 ರಿಂದ -12 ಲಕ್ಷ ಎನ್ನುತ್ತಿದೆ. ಬಹುದೊಡ್ಡ ಸಂಖ್ಯೆಯಲ್ಲಿರುವ ಪ. ಜಾತಿ ಪ. ಪಂಗಡ ಮುಖಂಡರು ಜಾತಿ ಆಧಾರದಲ್ಲಿ ನಮ್ಮನ್ನು ವಿಭಜನೆ ಮಾಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ. ಬ್ರಾಹ್ಮಣ ಕ್ರಿಶ್ಚಿಯನ್​, ಒಕ್ಕಲಿಗ ಕ್ರಿಶ್ಚಿಯನ್​, ಲಿಂಗಾಯತ ಕ್ರಿಶ್ಚಿಯನ್​, ಈಡಿಗ ಕ್ರಿಶ್ಚಿಯನ್​, ಬಲಿಜ ಕ್ರಿಶ್ಚಿಯನ್​, ಮಡಿವಾಳ ಕ್ರಿಶ್ಚಿಯನ್​ ಮುಂತಾದ ಪದಗಳನ್ನು ವರದಿಯಲ್ಲಿ ಬಳಸಲಾಗಿದೆ. ಇದರಿಂದ ಆಯಾ ಸಮುದಾಯಗಳು ನೋವು ವ್ಯಕ್ತಪಡಿಸಿವೆ ಎಂದರು.

ಜಾತಿಗಣತಿ ವರದಿ ರಚನೆಗೆ ಸಿದ್ದರಾಮಯ್ಯನವರೇ ಕಾಂತರಾಜ್​ ಸಮಿತಿ ನೇಮಿಸಿದ್ದು, ಅವರೇ ಇದಕ್ಕಾಗಿ ಹಣ ಬಿಡುಗಡೆ ಮಾಡಿದ್ದರು. ಈಗ ಸಂಪುಟ ಸಭೆ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡಬೇಕು. ಮತ್ತೊಂದು ಉಪಸಮಿತಿ ಮಾಡಿ ಮತ್ತಷ್ಟು ಕಾಲ ಮುಂದೂಡಬಹುದು. ರಾಜ್ಯ ಸರ್ಕಾರದ ಜಾತಿ ಜನಗಣತಿ ವರದಿಯ ಬಗ್ಗೆ ಬಿಜೆಪಿ ಕಾದು ನೋಡುವ ತೀಮಾರ್ನ ಮಾಡಿದೆ, ಈಗಾಗಲೇ ವರದಿಯ ಅಂಗೀಕಾರ, ಸ್ವೀಕಾರ, ಪ್ರಕಟಣೆ, ಬಿಡುಗಡೆ ವಿಚಾರದಲ್ಲಿ ಸರ್ಕಾರ ತಪ್ಪು ಮಾಡಿದೆ. ಬಿಜೆಪಿ ಮುಖಂಡರು ಸಭೆ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕೋಟ ಹೇಳಿದರು.

ಬಿಜೆಪಿ ಸರ್ಕಾರ ಉರುಳಿಸಿಲ್ಲ

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಒಗ್ಗಟ್ಟಾಗಿರಬೇಕು, ಇಲ್ಲದಿದ್ದರೇ ಮೋದಿ, ಅಮಿತ್​ ಷಾ ಸರ್ಕಾರವನ್ನು ಉರುಳಿಸುತ್ತಾರೆ ಎನ್ನುವ ಮೂಲಕ ಮಲ್ಲಿಕಾರ್ಜುನ ರ್ಖಗೆ ಅವರು ಸಿದ್ದರಾಮ್ಯ - ಡಿಕೆಶಿ ಒಗ್ಗಟ್ಟಾಗಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಬಿಜೆಪಿ ಯಾವತ್ತೂ ಇತರ ಸರ್ಕಾರಗಳನ್ನು ಉರುಳಿಸಿಲ್ಲ, ಬಿಜೆಪಿಗೆ ಆ ಮಾನಸಿಕತೆ ಇಲ್ಲ, ಆದರೇ ಕಾಂಗ್ರೆಸ್​ ಸರ್ಕಾರಗಳನ್ನು ಉರುಳಿಸುವುದರಲ್ಲಿ ಎತ್ತಿದ ಕೈ, ರ್ಖಗೆ ಅವರಿಗೆ ಇತಿಹಾಸ ಗೊತ್ತಿದೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ವಜಾ ಮಾಡಲು ಕೇಂದ್ರದ ಕಾಂಗ್ರೆಸ್​ ಯತ್ನಿಸಿತ್ತು ಎಂದರು.

ವಕ್ಫ್​ ಕಾಯ್ದೆ ಬೆಂಬಲಿಸಿ

ಕೇಂದ್ರ ಸರ್ಕಾರದ ವಕ್ಫ್​ ಮಸೂದೆಯ ವಿರುದ್ಧ ವಕ್ಫ್​ ಮಂಡಳಿ ಕೋರ್ಟಿಗೆ ಹೋಗುವ ಅಧಿಕಾರವಿಲ್ಲ. ಬಿಲ್​ ಜಾರಿಗೊಳಿಸುವ ಮೂಲಕ ಕೇಂದ್ರಸರ್ಕಾರ ವಕ್ಫ್​ ಮಂಡಳಿಯಲ್ಲಿ ಪಾರದರ್ಶಕತೆ ಜಾರಿಗೆ ತಂದಿದೆ. ಮತೀಯ ಮತ್ತು ಮತದ ಕಾರಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ವಕ್ಫ್​ ಕಾಯಿದೆಯನ್ನು ರಾಷ್ಟ್ರಭಕ್ತ ಮುಸ್ಲಿಮರು ಬೆಂಬಲಿಸಬೇಕು ಎಂದು ವಿನಂತಿ ಮಾಡಿದರು.