ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಭ್ರಷ್ಟಾಚಾರ ಪ್ರಕರಣ ಹಾಗೂ ಹುಳುಕು ಮರೆ ಮಾಚಿಸಲು ಅಧಿವೇಶನದ ಒಳಗೆ ಹಾಗೂ ಹೊರಗೆ ವಿನಾ ಕಾರಣವಾಗಿ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ನನ್ನ ಹೆಸರನ್ನೂ ಉಲ್ಲೇಖಿಸಿ ಭ್ರಷ್ಟಾಚಾರ ಮಾಡಿದ್ದಾಗಿ ಆರೋಪಿಸಿದ್ದಾರೆ. ಇದು ಅಪ್ಪಟ ಸುಳ್ಳು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿದ್ದ ಅವಧಿಯಲ್ಲಿ ಕೊಳವೆಬಾವಿ ನಿರ್ಮಾಣ ಹಾಗೂ ಬೋವಿ ನಿಗಮದಲ್ಲಿ ಅವ್ಯವಹಾರ ಮಾಡಿದ್ದಾಗಿ ಆರೋಪಿಸಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಹೀಗಾಗಿ ವಾರದೊಳಗೆ ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ಮಾಡಿರುವ ಆರೋಪ ಹಿಂಪಡೆಯಬೇಕು. ಅಥವಾ ನನ್ನ ವಿರುದ್ಧ ಸಿಬಿಐ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ಸತ್ಯ ಪ್ರತಿಪಾದನೆಗಾಗಿ ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸುತ್ತೇನೆ ಎಂದರು.
ನಾನು ಹಿಂದೆ ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದ ವೇಳೆ ಕೊಳವಿಬಾವಿ ಕೊರೆಸಲು ಟೆಂಡರ್ ಕರೆಯದೆ, ನೇರವಾಗಿ ರೈತರ ಖಾತೆಗೇ ಅನುದಾನ ಹಾಕಿಸಿ, ಯಾವುದೇ ಏಜೆನ್ಸಿಯಿಂದ ಅವರು ಕೊಳವೆಬಾವಿ ಕೊರೆಸಲು ಯೋಜನೆ ತಂದ ಸಚಿವ ನಾನು. ಪಾರದರ್ಶಕ ಆಡಳಿತ ನೀಡಿದ ಹೆಮ್ಮೆ ನನಗಿದೆ. ಬೋವಿ ನಿಗಮದಲ್ಲೂ ಸಹ ಒಂದು ರೂಪಾಯಿಯೂ ಅವ್ಯವಹಾರ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದಿದೆ. ನಿಜಕ್ಕೂ ನಾನು ಅವ್ಯವಹಾರ ಮಾಡಿದ್ದಲ್ಲಿ ನೀವು ಸಿಐಡಿ ತನಿಖೆಗೆ ಒಳಪಡಿಸಿ, ನನಗೆ ಜೈಲು ಶಿಕ್ಷೆ ಕೊಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.
ಈಗಿನ ಅಧಿಕಾರಿಗಳೂ ಸಹ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಿಂದೆ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಿಎಂಗೆ ಮಾಹಿತಿ ನೀಡಿದ್ದಾಗಿ ನನಗೆ ತಿಳಿದುಬಂದಿದೆ. ವಾಲ್ಮೀಕಿ ನಿಗಮದ ಹಗರಣ ಮುಚ್ಚಿಕೊಳ್ಳಲು ನನ್ನ ವಿರುದ್ಧ ಆರೋಪ ಮಾಡಿದ್ದೀರಿ. ರಾಜಕಾರಣ ಶಾಶ್ವತವಲ್ಲ. ಆದರೆ, ಸತ್ಯಕ್ಕೆ ಎಂದೂ ಅಪಚಾರ ಆಗಬಾರದು. ಹೀಗಾಗಿ ಸ್ಪಷ್ಟೀಕರಣಕ್ಕಾಗಿ ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ರವಾನಿಸಿದ್ದೇನೆ ಎಂದು ಸಂಸದ ಕೋಟ ಪೂಜಾರಿ ತಿಳಿಸಿದರು.