ಜಿಲ್ಲೆ

ಗ್ರಾಪಂ ನೌಕರರಿಗೆ ಇಎಸ್​ಐ ಸೌಲಭ್ಯ ಕಲ್ಪಿಸಿ...

ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ಕೇಂದ್ರ ಕಾರ್ಮಿಕ ಸಚಿವ ಡಾ. ಮನ್ಸುಕ್​ಗೆ ಮನವಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರ್ನಾಟಕ ರಾಜ್ಯದ 5,995 ಗ್ರಾಮ ಪಂಚಾಯಿತಿ ಸೇರಿದಂತೆ ದೇಶದಲ್ಲಿ ಒಟ್ಟು 2,55,401 ಗ್ರಾಮ ಪಂಚಾಯಿತಿ ಕಾರ್ಯನಿರ್ವಹಿಸುತ್ತಿದೆ. ಅವುಗಳಲ್ಲಿ 16,77,005 ಮಂದಿ ಸಿಬ್ಬಂದಿ ದುಡಿಯುತ್ತಿದ್ದು, ಇಎಸ್​ಐ (ಆರೋಗ್ಯ ವಿಮೆ) ಸೌಲಭ್ಯ ಸಿಗುತ್ತಿಲ್ಲ ಎಂಬ ಕೊರಗಿದೆ. ಕೂಡಲೇ ಗ್ರಾಪಂನ ಎಲ್ಲ ಸಿಬ್ಬಂದಿಗೆ ಈ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಡಾ. ಮನ್ಸುಕ್​ ಮಾಂಡವೀಯ ಅವರಿಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದರು.

ನವದೆಹಲಿಯಲ್ಲಿ ಏ.1ರಂದು ಬೆಳಗ್ಗೆ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಎಲ್ಲ ಗ್ರಾಪಂಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ನೀರುಗಂಟಿ, ಜಾಡಮಾಲಿ, ವಾಟರ್​ಮೆನ್​, ಕಂಪ್ಯೂಟರ್​ ಆಪರೇಟರ್​, ಜವಾನ ಸೇರಿದಂತೆ 10ಕ್ಕಿಂತ ಕಡಿಮೆ ಸಿಬ್ಬಂದಿ ಇದ್ದಾರೆ. ಈಗಿರುವ ನಿಯಮದಂತೆ ಸದರಿ ಸಿಬ್ಬಂದಿ ಆರೋಗ್ಯ ವಿಮೆಯಿಂದ ವಂಚಿತರಾಗಿದ್ದು,

ಸಂಕಷ್ಟ ಪಡುತ್ತಿದ್ದಾರೆ ಎಂದು ಗಮನಕ್ಕೆ ತಂದರು.

ಸಿಬ್ಬಂದಿ ಕುಟುಂಬಕ್ಕೆ ನೆರವಾಗಿ

ಮಾನವೀಯ ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಂದ ಮಾಹಿತಿಯೊಂದಿಗೆ ವರದಿ ಪಡೆದು ಗ್ರಾಪಂ ಸಿಬ್ಬಂದಿಗೂ ಇಎಸ್​ಐ ಸೌಲಭ್ಯ ನೀಡುವಂತಾಗಬೇಕು. ಬಡ ಸಿಬ್ಬಂದಿ ಕುಟುಂಬಕ್ಕೆ ನೆರವಾಗಬೇಕು ಎಂದು ಸಚಿವ ಡಾ. ಮನ್ಸುಕ್​ ಅವರಿಗೆ ಕೋಟ ಪೂಜಾರಿ ಲಿಖಿತ ಮನವಿ ಸಲ್ಲಿಸಿದರು.

ಈ ವೇಳೆ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್​ ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಸಚಿವರು, ಇಲ್ಲಿಯವರೆಗೆ ಈ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಅಗತ್ಯ ನಿರ್ಧಾರ ತೆಗೆದುಕೊಳ್ಳುವುದಾಗಿ ಸಂಸದ ಕೋಟ ಪೂಜಾರಿ ಅವರಿಗೆ ಭರವಸೆ ನೀಡಿದರು.