ಜಿಲ್ಲೆ

ಬುಡಕಟ್ಟು ಸಬಲೀಕರಣಕ್ಕೆ ಕೇಂದ್ರ ಬದ್ಧ

ಜಗಳೂರು: ಬುಡಕಟ್ಟು ಸಮುದಾಯಗಳ ಸಬಲೀಕರಣಕ್ಕಾಗಿ ಕೇಂದ್ರ ಜಾರಿಗೆ ತಂದಿರುವ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಗೆ ತಮಲೇಹಳ್ಳಿ ಸೇರಿ 20 ಗ್ರಾಮಗಳು ಆಯ್ಕೆಯಾಗಿವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ತಾಲೂಕಿನ ತಮಲೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೂರಾರು ವರ್ಷಗಳ ನಂತರ ತುಂಬಿದ ಕೆರೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

57 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆ ಸಿರಿಗೆರೆ ಶ್ರೀಗಳ ದೂರದೃಷ್ಟಿಯಾಗಿದೆ. ಅದರಂತೆ ಎಲ್ಲ ಕೆರೆಗಳಿಗೆ ನೀರು ಬಂದಿದ್ದು ರೈತರ ಮೊಗದಲ್ಲಿ ಹರ್ಷ ತಂದಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶ ಸಮೃದ್ಧಿಯಾಗಲಿದೆ ಎಂದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಕ್ಷೇತ್ರದ ಬಗ್ಗೆ ಸಂಸದರಿಗೆ ಅಪಾರವಾದ ಪ್ರೀತಿ, ಗೌರವವಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಾಗಿದೆ. ಹೆಚ್ಚಿನ ಕಾಳಜಿವಹಿಸಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಕಣ್ವಕುಪ್ಪೆಯ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜ್ಞಾನವಿರುವ ಕಡೆ ಸಂಸ್ಕಾರವಿರುತ್ತದೆ. ಈ ಗ್ರಾಮದಲ್ಲಿ ಹೆಚ್ಚು ವಿದ್ಯಾವಂತರು, ನೌಕರರಿದ್ದು, ಎಲ್ಲರ ಸಹಕಾರದಿಂದ ಮಕ್ಕಳ ಭವಿಷ್ಯಕ್ಕಾಗಿ ಡಿಜಿಟಲ್ ಗ್ರಂಥಾಲಯ ತೆರೆದಿರುವುದು ಶ್ಲಾಘನೀಯ ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಗ್ರಾಮಗಳಲ್ಲಿ ಹತ್ತಾರು ಕೋಟಿ ಖರ್ಚು ಮಾಡಿ ದೇವಸ್ಥಾನಗಳನ್ನು ಕಟ್ಟಿದ್ದಾರೆ. ಆದರೆ ತಮಲೇಹಳ್ಳಿ ಗ್ರಾಮದ ಯುವಕರು ಸ್ವತಃ ದುಡಿಮೆಯಲ್ಲಿ ಗ್ರಂಥಾಲಯ ನಿರ್ವಿುಸಿ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಹೆಚ್ಚುವರಿ ಎಸ್​ಪಿ ಡಾ.ಆರ್. ದಂಡಿನ ಶಿವಕುಮಾರ್, ಸಂಜಯ ಗಾಂಧಿ ಆಸ್ಪತ್ರೆ ನಿವೃತ್ತ ನಿರ್ದೇಶಕ ಡಾ.ಪ್ರಕಾಶಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಮುಸ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್​ರಾಜ್ ಪಟೇಲ್, ನಿವೃತ್ತ ಡಿವೈಎಸ್​ಪಿ ಕಲ್ಲೇಶಪ್ಪ, ನಿವೃತ್ತ ಡಿವೈಎಸ್​ಪಿ ಲೋಕಾಯುಕ್ತ ಒ.ಟಿ.ಕಲ್ಲೇಶಪ್ಪ, ಕೆ.ಪಿ.ಪಾಲಯ್ಯ, ಬಿ.ಮಹೇಶ್ವರಪ್ಪ, ಗ್ರಾಪಂ ಅಧ್ಯಕ್ಷೆ ಅಶ್ವಿನಿ ಅಂಜಿನಪ್ಪ, ಷಂಷೀರ್ ಅಹಮದ್, ತೋರಣಗಟ್ಟೆ ತಿಪ್ಪೇಸ್ವಾಮಿ, ನಿವೃತ್ತ ಉಪನ್ಯಾಸಕ ಡಾ.ಸುಭಾಷ್ ಚಂದ್ರಬೋಸ್, ಬಿಸ್ತುವಳ್ಳಿ ಬಾಬು, ಶಿವನಗೌಡ್ರು, ನಿವೃತ್ತ ಡಿವೈಎಸ್​ಪಿ ರುದ್ರಪ್ಪ, ಸಿದ್ದಲಿಂಗಪ್ಪ, ಹುಚ್ಚವ್ವನಹಳ್ಳಿ ನಾಗರಾಜ್ ಇದ್ದರು.

ಸಿಂಗಾರಗೊಂಡಿದ್ದ ತಮಲೇಹಳ್ಳಿ: ನೂರಾರು ವರ್ಷಗಳ ಬಳಿಕ ಕೆರೆ ತುಂಬಿ ಕೋಡಿ ಹರಿದ ಕಾರಣ ಗ್ರಾಮಸ್ಥರೆಲ್ಲ ಸೇರಿ ದಸರಾ ಜತೆಗೆ ಕೆರೆಯ ಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ. ತಮಲೇಹಳ್ಳಿ ಗ್ರಾಮದ ಮುಖ್ಯ ರಸ್ತೆ ಸೇರಿ ಬೀದಿಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ತಳಿರು ತೋರಣಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿತ್ತು. ಜಗಳೂರಿನಿಂದ ಬರುವ ಮಾರ್ಗದಿಂದ ಗ್ರಾಮದ ಕೆರೆಯವರೆಗೂ ಬಾಳೆ ಕಂಬ ಕಟ್ಟಲಾಗಿತ್ತು. ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.

ಗಮನ ಸೆಳೆದ ಭವ್ಯ ಮೆರವಣಿಗೆ: ಕಣ್ವಕುಪ್ಪೆ ನಾಲ್ವಡಿ ಶಾಂತಲಿಂಗ ಶ್ರೀಗಳು, ಮುಸ್ಟೂರಿನ ರುದ್ರಮುನಿ ಶಿವಾಚಾರ್ಯರು, ಶಾಸಕ ಬಿ.ದೇವೇಂದ್ರಪ್ಪ, ಕೆ.ಪಿ.ಪಾಲಯ್ಯ ಸೇರಿ ನಿವೃತ್ತ ಅಧಿಕಾರಿಗಳು, ರಾಜಕಾರಣಿಳನ್ನೊಳಗೊಂಡ ಗಣ್ಯಾತಿಗಣ್ಯರು ತಮಲೇಹಳ್ಳಿಗೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಆರತಿ ಬೆಳಗಿ ಆತ್ಮೀಯವಾಗಿ ಸ್ವಾಗತ ಮಾಡಿಕೊಂಡರು.

ನಂತರ ಆರಂಭಗೊಂಡ ಮೆರವಣಿಗೆಯ ದಾರಿಯುದ್ದಕ್ಕೂ ಯುವತಿಯರು, ಮಹಿಳೆಯರು ಪೂರ್ಣಕುಂಭ ಹೊತ್ತು ಎಲ್ಲರ ಗಮನ ಸೆಳೆದರು. ತಮಟೆ, ಡ್ರಮ್ೆಟ್, ಉರುಮೆ, ಕೋಲಾಟ ಸೇರಿ ವಿವಿಧ ಕಲಾತಂಡಗಳ ಮೆರಗು ನೀಡಿದವು. ವಾದ್ಯಗಳ ನಾದಕ್ಕೆ ಯುವಕರು, ವೃದ್ಧರು, ವಯಸ್ಕರು, ಮಹಿಳೆಯರು ಕುಣಿದು ಕುಪ್ಪಳಿಸಿದರು. ಶಾಸಕ ಬಿ.ದೇವೇಂದ್ರಪ್ಪ ಅವರನ್ನು ಅಭಿಮಾನಿಗಳು ಹೆಗಲ ಮೇಲೆ ಹೊತ್ತು ಕುಣಿದು ಸಂಭ್ರಮಿಸಿದರು.

ಸೇಬಿನ ಹಾರ: ಶಾಸಕರು ಸೇರಿ ಗಣ್ಯರನ್ನು ಸ್ವಾಗತಿಸಲು ಗ್ರಾಮಸ್ಥರು ನೂರಾರು ಕೆಜಿಯ ಸೇಬಿನ ಹಾರ ಮಾಡಿಸಿದ್ದರು. ಮೆರವಣಿಗೆ ಗ್ರಾಮದ ದೇವಸ್ಥಾನ ಬಳಿ ಬರುತ್ತಿದ್ದಂತೆ ಜೆಸಿಬಿ ಯಂತ್ರದ ಸಹಾಯದಿಂದ ಶಾಸಕ ಬಿ.ದೇವೇಂದ್ರ ಸೇರಿ ಎಲ್ಲರಿಗೂ ಹಾರ ಹಾಕಲಾಯಿತು.