ಕಾರವಾರ: ಒಂದು ಪಕ್ಷದ ಚಿನ್ಹೆಯಡಿ ಆಯ್ಕೆಯಾದವರು ಆ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧವಾಗಿ ಪಕ್ಷದ ಚೌಕಟ್ಟಿನಲ್ಲಿ ತೊಡಗಿಸಿಕೊಳ್ಳುವುದು ಶಾಸಕರಾದವರ ಪ್ರಾಥಮಿಕ ಜವಾಬ್ದಾರಿ. ಅದಾಗುತ್ತಿಲ್ಲ ಎಂದಾದಲ್ಲಿ ಶಿವರಾಮ ಹೆಬ್ಬಾರ ಅವರು ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಸಂಸದ ವಿಶ್ವೇಶರ ಹೆಗಡೆ ಕಾಗೇರಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಭೆ ಚುನಾವಣೆ ಹಾಗೂ ಸಂಸದರ ಚುನಾವಣೆಯಲ್ಲಿ ಅವರ ವರ್ತನೆಯಿಂದ ಅವರಿಗೆ ಪಕ್ಷದ ಸಿದ್ಧಾಂತ ಒಪ್ಪಿಗೆಯಾಗದು ಎಂಬುದು ಸ್ಪಷ್ಟವಾಗಿದೆ. ಇದರಿಂದ ಅವರು ರಾಜೀನಾಮೆ ನೀಡಿದಲ್ಲಿ ಬಿಜೆಪಿ ಚುನಾವಣೆ ಎದುರಿಸಲು ಸಿದ್ಧವಿದೆ ಎಂದರು.
ರಾಜ್ಯದಲ್ಲಿ ಅತ್ಯಧಿಕ ಮತ ಪಡೆದು ಆಯ್ಕೆಯಾಗಿರುವುದರಿಂದ ಜವಾಬ್ದಾರಿ ಹೆಚ್ಚಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅನುಭವಸ್ಥರ ಅಭಿಪ್ರಾಯ ಪಡೆದು, ಒಂದು ನೀಲಿ ನಕ್ಷೆ ರೂಪಿಸುತ್ತೇನೆ. ನೀಲಿ ನಕ್ಷೆ ಹಾಗೂ ಪ್ರಣಾಳಿಕೆಯಲ್ಲಿರುವ ಎಲ್ಲ ವಿಷಯವನ್ನು ಜಾರಿಗೆ ತರಲು ಕೇಂದ್ರ ಸರ್ಕಾರದ ಎಲ್ಲ ಸಚಿವರ ಸಹಕಾರ ಪಡೆದು, ಜನರ ಅಪೇಕ್ಷೆ, ನಿರೀಕ್ಷೆಯಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಕಾಗೇರಿ ಭರವಸೆ ನೀಡಿದರು.
ಕೇಂದ್ರ ಸರ್ಕಾರ ಯೋಜನೆಗಳ ಫಲ ಜನರಿಗೆ ತ್ವರಿತವಾಗಿ ಸಿಗುವಂತೆ ಮಾಡಲು ಕ್ರಮ ವಹಿಸಲಾಗುವುದು. ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಪಾಲ್ಗೊಳ್ಳುವಿಕೆ ಬೇಕಾಗಿದೆ. ಅದನ್ನು ಪಡೆಯುವ ಎಲ್ಲ ಜವಾಬ್ದಾರಿ ನಮ್ಮದು. ಕೆಲವು ಯೋಜನೆಗಳು ಚುರುಕು ಮಾಡುವ ಕಾರ್ಯ ಮಾಡಲಾಗುವುದು ಎಂದರು.
ಲೋಕಸಭಾ ಚುನಾವಣೆ ಫಲಿತಾಂಶವನ್ನು ನೋಡಿದಾಗ ಅಲ್ಪ ಸಂಖ್ಯಾತರು ಒಂದೇ ಕಡೆ ಮತ ಚಲಾಯಿಸಿರುವುದು ಕಂಡುಬರುತ್ತದೆ. ಕೇಂದ್ರ ಸರ್ಕಾರದ ಎಲ್ಲ ಸೌಲಭ್ಯವನ್ನು ಪಡೆದು, ಒಂದು ಮತವನ್ನೂ ಬಿಜೆಪಿಗೆ ಹಾಕುವುದಿಲ್ಲ ಎಂಬ ಅಲ್ಪಸಂಖ್ಯಾತರ ನಿಲುವು ಸರಿಯಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ಹೊರ ಹಾಕಿದರು.
ಅಲ್ಪಸಂಖ್ಯಾತರು ಕಾಂಗ್ರೆಸ್ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಅವರು ರಾಷ್ಟ್ರೀಯ ಮುಖ್ಯವಾಹಿನಿಗೆ ಬರದಂತೆ ಕಾಂಗ್ರೆಸ್ ತಡೆಯುತ್ತಿದೆ. ಅದನ್ನು ಅಲ್ಪಸಂಖ್ಯಾತ ಸಮುದಾಯ ಅದನ್ನು ಅರ್ಥ ಮಾಡಿಕೊಂಡು ಮತದಾನದ ವಿಚಾರದಲ್ಲೂ ಜಾರಿಗೆ ತರಬೇಕಿದೆ ಎಂದು ಆಶಿಸಿದರು.