ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡಲು ಬೆಂಬಲ ನೀಡಿದಂತಾಗುತ್ತದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪ್ರಕರಣ ವಾಪಸ್ ಪಡೆಯಬೇಕು ಎಂಬುದನ್ನು ಸರ್ಕಾರ ತಿಳಿಯಬೇಕು. ರೈತ ಹೋರಾಟ ಪ್ರಕರಣ ಹಿಂಪಡೆದರೆ ಸರಿ. ಆದರೆ, ಪೊಲೀಸ್ ಠಾಣೆಯ ಮೇಲೆ ದಾಳಿ, ಪೊಲೀಸರ ಮೇಲೆ ಹಲ್ಲೆ ಮಾಡಿದ ಕೇಸ್ ಮರಳಿ ಪಡೆದಿರುವ ನಿರ್ಧಾರ ಖಂಡನೀಯ ಎಂದರು.
ಸರ್ಕಾರ ಎಲ್ಲ ಸಮಾಜದವರನ್ನು ಒಟ್ಟಾಗಿ ನೋಡಬೇಕು. ಅದನ್ನು ಬಿಟ್ಟು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿ ಕಾನೂನು ವ್ಯವಸ್ಥೆ ಹದಗೆಡುವ ಪ್ರಕರಣಗಳಿಗೆ ಪ್ರೋತ್ಸಾಹ ಕೊಡಬಾರದು. ಎಷ್ಟೋ ಅಮಾಯಕರ ಮೇಲೆ ಹಲವಾರು ವರ್ಷಗಳಿಂದ ರೌಡಿಶೀಟ್ ಪ್ರಕರಣಗಳಿವೆ. ಅಂಥವರ ರೌಡಿಶೀಟ್ ತೆಗೆದು ಒಳ್ಳೆಯವರನ್ನಾಗಿ ಮಾಡಲಿ ಎಂದರು.