ಉಡುಪಿ: ನವಿಲು ಗರಿ ಮರಿ ಹಾಕುವುದಿಲ್ಲ ಎಂಬುದಾಗಿ ಬಿಜೆಪಿ ಅಪಪ್ರಚಾರ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಮೂಲಕ ನವಿಲು ಮರಿ ಹಾಕಿದೆ. ಶ್ರೀಮಂತರ ಸಾಲ ಮನ್ನಾ ಮಾಡಿದವರಿಗೆ ಬಡವರ ಗ್ಯಾರಂಟಿಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಎಲ್ಲ ವರ್ಗದವರಿಗೂ ಆರ್ಥಿಕ ನೆರವನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯ ಅನುಸರಿಸಿದೆ ಎಂದು ಮಾಜಿ ಸಚಿವ, ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಚಿಕ್ಕಮಗಳೂರಿನ ಕುರವಂಗಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜನಪ್ರತಿನಿಧಿಗಳಿಂದ ಕ್ಷೇತ್ರದ ಕೆಲಸಗಳನ್ನು ಮಾಡಿಕೊಳ್ಳುವಷ್ಟು ಅರಿವು ನಮ್ಮಲ್ಲಿ ಮೂಡಬೇಕು. ಬರೇ ಆಶ್ವಾಸನೆಗಳಿಗೆ ಮರುಳಾಗಬಾರದು. ಪ್ರವಾಸೋಸದ್ಯಮದ ಬಗ್ಗೆ ಹೆಚ್ಚಿನ ಕಾರ್ಯ ನಡೆಯಬೇಕಿದೆ. ಇದರಿಂದ ಉದ್ಯೋಗ ಅವಕಾಶಗಳು ಹುಟ್ಟಿಕೊಳ್ಳುತ್ತವೆ. ಆದರೆ ಕೇಂದ್ರ ಸರ್ಕಾರ ಮಾಡುತ್ತಿರುವ ಕೆಲಸ ಉದ್ದಿಮೆಗಳನ್ನು ಮಾರಾಟ ಮಾಡುವುದು. ಇದರಿಂದ ದೇಶದ ಯುವ ಜನತೆಗೆ ಹೇಗೆ ಕೆಲಸ ಸಿಗುತ್ತದೆ ಎಂದು ಪ್ರಶ್ನಿಸಿದರು.
ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂಬ ಬಿಜೆಪಿ ನಾಯಕರ ನಿಲುವು ಈ ದೇಶದ ಭವಿಷ್ಯಕ್ಕೆ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಆದ್ದರಿಂದ ಒಳ್ಳೆಯ ದಿನಗಳಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ದೇಶದ ಭವಿಷ್ಯಕ್ಕೆ ಕೈ ಜೋಡಿಸಿ ಎಂದು ಹೇಳಿದರು.
ಶಾಸಕ ತಮ್ಮಯ್ಯ, ಮಾಜಿ ಶಾಸಕಿ ಗಾಯತ್ರಿ ಶಾಂತೆಗೌಡ, ಮುಂಚೂಣಿ ಘಟಕದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.