ಆನೇಕಲ್​ ತಾಲೂಕಿನ ನೆರಳೂರು ಬಳಿ ಹೆದ್ದಾರಿ ಪರಿಶೀಲನೆ ಬಳಿಕ ಸ್ಥಳಿಯರಿಂದ ಮಾಹಿತಿ ಪಡೆದ ಸಂಸದ ಡಾ.ಮಂಜುನಾಥ್​. 
ಜಿಲ್ಲೆ

ಸಂಸದ ಡಾ.ಮಂಜುನಾಥ್​ ಹೆದ್ದಾರಿ ರೌಂಡ್ಸ್​

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​  ಭಾರಿ ಮಳೆಯಿಂದ ಹೊಸೂರು&ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಗ್ರಾಮಾಂತರ ಲೋಕಸಭಾ ಸಂಸದ ಡಾ.ಸಿ.ಎನ್​.ಮಂಜುನಾಥ್​ ಹೆದ್ದಾರಿ ಪರಿಶೀಲನೆ ನಡೆಸಿದರು.

ನಾಲ್ಕೆ$ದು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಹೊಸೂರು&ಬೆಂಗಳೂರು ಮುಖ್ಯರಸ್ತೆಯ ಹಳೆಯ ಚಂದಾಪುರ ನೆರಳುರು ಭಾಗದ ಹೆದ್ದಾರಿಯಲ್ಲಿ ನೀರು ನಿಂತು ವಾಹನಸವಾರರು ಗಂಟೆಗಟ್ಟಲೆ ಪರದಾಡಿದ್ದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸ್ಥಳಿಯರು ಹಾಗೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಹೆದ್ದಾರಿ ಮೂಲಕ ಸಂಚರಿಸುವ ಸವಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಪರಿಶೀಲಿಸಲು ಸ್ಥಳಿಯರು ಹಾಗೂ ಅಧಿಕಾರಿಗಳ ಜತೆ ಆಗಮಿಸಿದ ಸಂಸದರು, ನೆರಳೂರು ಹೆದ್ದಾರಿ ಪರಿಶೀಲನೆ ನಡೆಸಿ ಮಾತುಕತೆ ನಡೆಸಿದರು.

ಹೆದ್ದಾರಿಯಲ್ಲಿ ನೀರು ತುಂಬಲು ಕಾರಣ ಏನು, ಪದೇಪದೆ ಈ ಸಮಸ್ಯೆ ಆಗುತ್ತಿದ್ದರೂ ಪರಿಹಾರ ಯಾಕೆ ಕಲ್ಪಿಸಿಲ್ಲ ಎಂದು ಅಧಿಕಾರಿಗಳಿಗೆ ಸಂಸದರು ಪ್ರಶ್ನಿಸಿದರು. ಕೂಡಲೇ ಸಮಸ್ಯೆ ಬಗೆಹರಿಸಿ ಹೆದ್ದಾರಿಯಲ್ಲಿ ಸಾರ್ವಜನಿಕರು ಮತ್ತು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿ ಸುರತ ವಾಹನ ಸಂಚಾರ ಆಗಬೇಕು ಎಂದು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಪದೇಪದೆ ಚಂದಾಪುರ ಹೆದ್ದಾರಿಯಲ್ಲಿ ನೆರಳೂರು ಭಾಗದ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.

ರಸ್ತೆ ವಿಭಜಕ ನಿರ್ಮಿಸಿ  : ಪ್ರತಿನಿತ್ಯ ಚಂದಾಪುರ ಸರ್ಕಲ್​ನಲ್ಲಿ ಗಂಟೆಗಟ್ಟಲೆ ಟ್ರಾಫಿಕ್​ ಸಮಸ್ಯೆ ಆಗುತ್ತಿದ್ದು, ಇದನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸಿ.ಎನ್​.ಮಂಜುನಾಥ್​ ಅವರಿಗೆ ಚಂದಾಪುರ ಪುರಸಭೆ ಅಧ್ಯಕ್ಷ ಹಾಗೂ ಸದಸ್ಯರು ಮನವಿ ಮಾಡಿದರು. ಇತ್ತ ದಾನಹಳ್ಳಿ ಗೇಟ್​ ಬಳಿ ರಸ್ತೆ ವಿಭಜಕ ಮಾಡಿಕೊಡಬೇಕು ಎಂದು ಸ್ಥಳಿಯರು ಒತ್ತಾಯಿಸಿದರು. ಅಧಿಕಾರಿಗಳ ಜತೆ ಚಂದಾಪುರದಿಂದ ಅತ್ತಿಬೆಲೆವರೆಗೆ ಪರಿಶೀಲನೆ ನಡೆಸಿದ ಸಂಸದರು ನೆರಳೂರು ಗ್ರಾಮದ ಬಳಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುಖಂಡರಾದ ಕೃಷ್ಣಾರೆಡ್ಡಿ, ನೆರಳೂರು ರಾಮಸ್ವಾಮಿ, ವರದರಾಜು, ನೆರಳೂರು ಮುರುಳಿ, ಕಿತ್ತಗಾನಹಳ್ಳಿ ಹರೀಶ್​, ಇತರರು ಇದ್ದರು.