ಜಿಲ್ಲೆ

ತುಳು ಎಂಎ ಅಧ್ಯಯನ ಪ್ರವೇಶ ಶುಲ್ಕ ಕಡಿತಕ್ಕೆ ಸಂಸದ ಕ್ಯಾ.ಚೌಟ ಮನವಿ

Mangaluru - Hariprasad Rai



ಮಂಗಳೂರು : ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗಿ ಮಂಗಳೂರು ವಿಶ್ವವಿದ್ಯಾಲಯ ಆರಂಭಿಸಿರುವ ತುಳು ಸ್ನಾತಕೋತ್ತರ ಪ್ರವೇಶ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದು, ಸರ್ಕಾರ ಕೂಡಲೇ ಶುಲ್ಕ ಕಡಿತಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಪತ್ರ ಬರೆದಿರುವ ಕ್ಯಾ. ಚೌಟ ಅವರು, ಮಂಗಳೂರು ವಿವಿಯಲ್ಲಿ ತುಳು
ಸ್ನಾತಕೋತ್ತರ ವಿಭಾಗದ 2024-25ನೇ ಸಾಲಿನ ಪ್ರವೇಶ ಶುಲ್ಕವನ್ನು 22,410 ರೂ. ಏರಿಸುವ ಮೂಲಕ ತುಳು ಭಾಷೆ ಅಧ್ಯಯನ ಮಾಡಬಯಸುವವರಿಗೆ ಆರ್ಥಿಕ ಹೊರೆಯುಂಟು ಮಾಡಲಾಗಿದೆ. ಆರಂಭದಲ್ಲಿ ತುಳು ಎಂ.ಎ .ಕೋರ್ಸ್‌ಗೆ 15 ಸಾವಿರ ರೂ. ಪ್ರವೇಶ ಶುಲ್ಕ ಇತ್ತು. ಈಗ ಮೂರು ವರ್ಷದ ಬಳಿಕ 22,410 ರೂ.ಗೆ ಶುಲ್ಕ ಏರಿಕೆ ಮಾಡಿರುವುದರಿಂದ ತುಳು ಎಂಎ ಅಧ್ಯಯನಕ್ಕೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತುಳು ಭಾಷೆಗೆ ಅಧಿಕೃತ ಭಾಷೆ ಮಾನ್ಯತೆ ಪಡೆಯುವುದಕ್ಕೆ ಪ್ರಯತ್ನಗಳು ನಡೆಯುತ್ತಿರಬೇಕಾದರೆ, ರಾಜ್ಯ ಸರ್ಕಾರವು ತುಳು ಭಾಷೆ
ಉತ್ತೇಜನಕ್ಕೆ ಸಹಕಾರಿಯಾಗಿರುವ ಎಂಎ ಅಧ್ಯಯನ ಕೋರ್ಸ್‌ನ ಪ್ರವೇಶ ಶುಲ್ಕ ಹೆಚ್ಚಿಸಿರುವುದು ಸರಿಯಲ್ಲ. ಸ್ಥಳೀಯ ಭಾಷೆಗೆ ನೆರವು ನೀಡುವ ನಿಟ್ಟಿನಲ್ಲಿ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಬೇಕೆಂಬ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ 2020-21ನೇ ಸಾಲಿನಿಂದ 4 ಸಾವಿರ ರೂ. ಕಡಿತಗೊಳಿಸಲಾಗಿತ್ತು. ಈಗ 3 ವರ್ಷದ ಬಳಿಕ ವಿವಿಯು ಪ್ರವೇಶ ಶುಲ್ಕ ಹೆಚ್ಚಿಸುವ ಮೂಲಕ ತುಳು ಭಾಷೆ ಅಧ್ಯಯನಾಸಕ್ತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಹೀಗಾಗಿ, ಕೂಡಲೇ ಶುಲ್ಕ ರಿಯಾಯಿತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಮನವಿ ಮಾಡಿದ್ದಾರೆ.
*ಕುಲಪತಿ ಪ್ರೊ. ಧರ್ಮ ಅವರಿಗೆ ಮನವಿ
ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಕೂಡ ತುಳು ಎಂಎ ಅಧ್ಯಯನ ಕೋರ್ಸ್‌ನ ಪ್ರವೇಶ ಶುಲ್ಕವನ್ನು ಕಡಿತಗೊಳಿಸುವುದಕ್ಕೆ ಸಂಬಂಧಪಟ್ಟ ಇಲಾಖೆ ಮೂಲಕ ಸರ್ಕಾರದ ಮಟ್ಟದಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಬೇಕು ಎಂದು ಸಂಸದ ಕ್ಯಾ. ಚೌಟ ಮನವಿ ಮಾಡಿದ್ದಾರೆ.